ಕರುಣಿಸೈ ಗುರುರಾಯ ಚರಣತೀರ್ಥವನು
( ರಾಗ ಮುಖಾರಿ ತ್ರಿವಿಡೆ ತಾಳ)
ಕರುಣಿಸೈ ಗುರುರಾಯ ಚರಣತೀರ್ಥವನು
ಹರಣ ಭಯದೊಳು ಲಕುಮೀರಮಣನೊಲಿವಂದದಲಿ ||ಪ||
ದೇಶ ದೇಶವ ತಿರುಗಿ ಬೇಸರದು ಈ ಚರಣ
ಭೂಸುರವ ಪೂಜಿಸುವದು ಈ ದಿವ್ಯ ಚರಣ
ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ
ಕಾಶಿ ರಾಮೇಶ್ವರಕೆ ನಡೆದ ಚರಣ ||೧||
ಹಾವಿಗೆಯನೊಲ್ಲದೆ ಹಾದಿ ನಡೆದ ಈ ಚರಣ
ದೇವಿ ಭಾಗೀರಥಿಗೆ ಇಳಿದ ಚರಣ
ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ
ಕೋವಿದರು ವಂದಿಸುವ ದಿವ್ಯ ಚರಣ ||೨||
ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ
ಸೃಷ್ಟಿಗುತ್ತಮ ನದಿಯ ಮಿಂದ ಚರಣ
ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ
ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ ||೩||
ಶುದ್ಧ ವೈಷ್ಣವರೆಲ್ಲ ಉಜ್ಜಿತೊಳೆವ ಚರಣ
ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ
ಮಧ್ವರಾಯನ ಮತದಿ ಎದ್ದು ತಿರುಗುವ ಚರಣ
ವಿದ್ಯೆ ನಿಧಿ ಗುರುರಾಯ ಬಾಳ್ದ ಚರಣ ||೪||
ಧರಣಿಯನು ಬಲವಂದು ದಣಿದು ಬಂದಿಹ ಚರಣ
ಉರುತರದ ಕೈವಲ್ಯ ಪಡೆದ ಚರಣ
ವರಾಹ ತಿಮ್ಮಪ್ಪನಿಹ ಗಿರಿಯನೇರಿದ ಚರಣ
ಸ್ಥಿರವಾಗಿ ಉಡುಪಿಯೊಳು ನಿಂದ ಚರಣ ||೫||
----ಇದು ನೆಕ್ಕರ ಕೃಷ್ಣದಾಸರ ರಚನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments