ಕರುಣಸಾಗರನಹುದೊ ಶರಣಜನರ ಪ್ರಿಯ
( ಜೀವನಪುರಿ ರಾಗ ತೀನ್ ತಾಳ)
ಕರುಣಸಾಗರನಹುದೊ ಶರಣಜನರ ಪ್ರಿಯ ||ಪ||
ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ
ದುರಿತ ಬಂದಡರಿದ ಅವಸರದೊಳು ನೀ
ಪರಿಹರಿಸಿದ್ಯೊ ಶ್ರಮ ಪರಮದಯಾಳ ||೧||
ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೋ ಪೂರ್ಣ
ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ
ಪರಿಪರಿ ಕಾಯಿದ್ಯೊ ತರಳ ಪ್ರಹ್ಲಾದನ ||೨||
ಧರ್ಮಪತ್ನಿಯ ಸೆರಗ ಭರದಿಂದೆಳೆಯುವ ಸಮಯ
ಸ್ಮರಣಿ ಒದಗಿ ಬಂದ್ಯೊ ಪರಿಪರಿ ವಸ್ತುವ
ಪೂರಿಸಿದ್ಯೊ ಶ್ರೀಹರಿ ಕೃಷ್ಣ ಕೃಪಾಳು ||೩||
ಅರಗಿನ ಮನೆಯೊಳು ಮರೆಮೋಸ ಮಾಡಿರಲು
ದೋರಿ ವಿವರದಿಂದ ಪೊರವೊಂದಿಸಿದ್ಯೋ ಸ್ವಾಮಿ
ಶರಣಾಗತವತ್ಸಲ ಪಾಂಡವಪ್ರಿಯ ||೪||
ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ
ಬಾಲಕ ಮಹಿಪತಿಯ ಪಾಲಕ ನೀನಹುದೊ
ಮೂಲೋಕದೊಡೆಯ ಶ್ರೀಹರಿದಯಾಳು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments