ಕರುಣದಿ ಕಣ್ಣು ತೆರೆಯೆ ...
ಧನಾಸರಿ - ಆದಿತಾಳ
ಕರುಣದಿ ಕಣ್ಣು ತೆರೆಯೆ | ಬಾರಮ್ಮ ಸಿರಿಯೇ |ಪ|
ಧರಣಿಯೊಳಗೆ ಸುಂ | ದರತರ ಕೊಲ್ಹಾ
ಪುರ ಸಿಂಹಾಸನದಿ ಮೆರೆವ ದೊರಿಯೆ |ಅ|
ವಿಧಿ ಭವಾದಿಗಳ ಸದನಗಳಿಗೆ ಅ
ಭ್ಯುದಯ ಕಟಾಕ್ಷದ ಸುಧೆಯವಗರೆಯೆ
ಸುಂದರಾನನರವಿಂದದ ಮಲ್ಲಿಗೆ
ಮಂದಹಾಸ ಮಕರಂದವ ಸುರಿಯೆ
ಕಡುಬೆಡಗಿನ ನಿನ್ನಡಿದಾವರೆಗಳ
ಬಿಡದೆ ಭಜಿಪ ವರಕೊಡು ಸುಂದರಿಯೆ
ಬಡವರಭೀಷ್ಟವ ಕೊಡುವಳೆಂದು ಬಡ
ಬಡಿಸಿ ಬಂದೆ ನಿನ್ನೊಡಲಿನ ಮೊರೆಯೆ
ಕೊಟ್ಟರೆ ಕಮಲೇಶವಿಠಲರಾಯನ
ಪಟ್ಟದರಸಿಯೆಂಬ ಕಟ್ಟಳೆ ಖರೆಯೆ
(ಕಮಲೇಶವಿಠಲ ಎಂಬ ಅಂಕಿತದಿಂದ ಪದಗಳನ್ನು ರಚಿಸಿದ ಸುರಪುರದ ಆನಂದದಾಸರ ಈ ಪದವನ್ನು ಬೇಲೂರು ಕೇಶವದಾಸರ ಕರ್ನಾಟಕ ಭಕ್ತ ವಿಜಯದಲ್ಲಿ ಕಂಡೆ)
ದಾಸ ಸಾಹಿತ್ಯ ಪ್ರಕಾರ
- Log in to post comments