ಕಣ್ಣಿನಿಂದ ನೋಡೋ ಹರಿಯ
(ರಾಗ ಕಾಪಿ ಛಾಪುತಾಳ)
ಕಣ್ಣಿನಿಂದ ನೋಡೋ ಹರಿಯ ||ಪ||
ಒಳಗಣ್ಣಿನೊಳಗಿಂದ ನೋಡೋ ಮೂಜಗದೊಡೆಯನ ||ಅ||
ಆಧಾರ ಮೊದಲಾದ ಆರು ಚಕ್ರ
ಶೋಧಿಸಿ ಬಿಡಬೇಕು ಈಷಣ ಮೂರು
ಸಾಧಿಸಿ ಸುಷುಮ್ನಾ ಏರು , ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು ||
ಎವೆ ಹಾಕದೆ ಮೇಲೆ ನೋಡಿ , ಬೇಗ
ಪವನನಿಂದಲಿ ವಾಯುಬಂಧನ ಮಾಡಿ
ಸವಿದು ನಾದವ ಪಾನಮಾಡಿ , ಅಲ್ಲಿ
ನವವಿಧಭಕ್ತಿಲಿ ನಲಿನಲಿದಾಡಿ ||
ಅಂಡಜದೊಳಾಡುತಾನೆ , ಭಾನು-
ಮಂಡಲ ನಾರಾಯಣನೆಂಬೋವನೆ
ಕುಂಡಲಿತುದಿಯೊಳಿದ್ದಾನೆ , ಶ್ರೀಪು-
ರಂದರವಿಠಲ ಪಾಲಿಸುತಾನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments