ಕಟಿಯಲ್ಲಿ ಕರವಿಟ್ಟನು, ಜಗದೀಶನು
(ರಾಗ ತೋಡಿ ಛಾಪುತಾಳ)
ಕಟಿಯಲ್ಲಿ ಕರವಿಟ್ಟನು, ಜಗದೀಶನು ||ಪ||
ರಾಜಸೂಯಯಾಗದಲ್ಲಿ ರಾಜೇಶ್ವರ
ರಾಜರು ಮೊದಲಾದ ಸುರರೆಲ್ಲರು
ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು
ರಾಜೀವಾಕ್ಷನು ಎತ್ತಿದಾಯಾಸದಿಂದಲೋ ||
ಗೊಲ್ಲಬಾಲಕರೊಡಗೂಡಿ ತಾ ಬಂದು
ಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದು
ಬಲ್ಲಿದ ತೃಣಾವರ್ತ ಮೊದಲಾದಸುರರನ್ನು
ಎಲ್ಲರನ್ನು ಕೊಂದ ಆಯಾಸದಿಂದಲೊ ||
ಧರಣಿಯನು ತಂದ ದನುಜ ಹಿರಣ್ಯಕನ
ಕೋರೆದಾಡೆಯಿಂದ ಸೀಳಿದಿಂದಲೊ
ವಾರಿಜಮುಖಿ ಸರ್ವಕಾಲದಲಿ ನಿಂತು
ಸೇರಿ ಸುರತ ಮಾಡಿದಾಯಾಸದಿಂದಲೊ ||
ಸುರಪತನಯಗೆ ಸಾರಥ್ಯವನು ಮಾಡಿ
ಭರದಿಂದ ಚಕ್ರವ ಪಿಡಿದಿಂದಲೊ
ಪರಿಪರಿವಿಧದಿಂದ ಕುದುರೆಗಳನೆ ತೊಳೆದು
ಪರಿಪರಿ ಕೆಲಸದ ಆಯಾಸದಿಂದಲೊ ||
ಮುದದಿಂದ ವ್ರಜದ ಹದಿನಾರು ಸಾವಿರ
ವನಿತೆಯರಾಳಿದ ಮದದಿಂದಲೊ
ಮದಗಜಗಮನೇರ ಮಧುರಾಂತಕನ
ಒದಗಿ ಮಾವನ ಕೊಂದ ಆಯಾಸದಿಂದಲೊ ||
ಮಮತೆಯಿಂದಲಿ ಭಕ್ತಜನರು ನಿಮ್ಮ ಚರಣ-
ಕಮಲಯುಗವನು ಸ್ತುತಿಸುತಿರಲು
ಮಮತೆಯಿಂದಲಿ ಬಂದು ಅಭಯಗಳನೆ ಕೊಟ್ಟು
ಕಮಲನಾಭ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments