ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ
(ರಾಗ ಕಮಾಚ್ ಅಟತಾಳ)
ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ||
ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ
ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||
ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ ||
ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು ||
ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ
ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ ||
ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ
ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ ||
ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗನೆ ||
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ ||
ಮತ್ತು ಕಂಡಳು ಅವಳು ಗೋಕುಲವೆಲ್ಲವ
ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ ||
ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು
ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ ||
ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ
ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು ||
ಕಂದನು ನೀನಲ್ಲ ಕಂದರ್ಪ ಜನಕನೆ
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ ||
ದೇವದಿದೇವನೆ ದೇವಕಿತನಯನೆ
ಭಾವಜನಯ್ಯನೆ ಬಾರಯ್ಯ ದೊರೆಯೆ ||
ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ
ಜಯಗಳಾಗಲಿ ಅವನ ಭಕ್ತರ ವೃಂದಕೆ ||
ಲೀಲಾವಿನೋದನು ರುಕ್ಮಿಣೀಲೋಲನು
ಲೀಲೆ ತೋರಿದನಂದು ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments