ಕಂತುಪಿತನೆ ನಿನ್ನ ಎಂತು ವರ್ಣಿಪೆ
(ಕಾಂಬೋಧಿ ರಾಗ , ರೂಪಕ(ಆದಿ?)ತಾಳ)
ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ-
ಕಾಂತ ಪಾಲಿಸೆನ್ನನು ನಿರಂತರದಲಿ ||ಪ||
ಕುಂತೀಪುತ್ರಗೆ ನೀನತ್ಯಂತ ಸಾರಧಿತ್ವವ ಮಾಡಿ
ನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಿಸಿದ ಧೀರ ||ಅ.ಪ||
ಸುಂದರವದನ ನಿನ್ನ ಕಂದ ಭಜಿಸಲು ಮುದ-
ದಿಂದ ಕಂಬದೊಳ್ಬಂದೆ ಮಂದರೋದ್ಧರ
ಸಿಂಧುಶಾಯಿ ರಕ್ಕಸನ ಕೊಂದು ಕರುಳಮಾಲೆಯನ್ನು
ಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ ||೧||
ಜಂಭವೈರಿ ಮುಖ್ಯ ಸುರಕದಂಬ ಪೂಜಿತಾಂಘ್ರಿಯುಗಳ
ನಂಬಿದ ಭಕ್ತರ ಕಾಯ್ವ ಅಂಬುಜನೇತ್ರ
ಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆ
ಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ ||೨||
ಗಂಗೆಯ ಜನಕ ನಿನ್ನ ಅಂಗನೆ ದ್ರೌಪದ ದೇವಿ
ಭಂಗಬಿಡಿಸೆಂದು ಕೂಗೆ ಮಂಗಳಾಂಗನೆ
ಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥ
ರಂಗವಿಠಲ ಪಾಲಿಸೀಗ ತುಂಗವಿಕ್ರಮ ಎನ್ನ ಮಾತು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments