ಕಂಜನೇತ್ರೆ ಶುಭ ಮಂಜುಳಗಾತ್ರೆ

ಕಂಜನೇತ್ರೆ ಶುಭ ಮಂಜುಳಗಾತ್ರೆ

(ರಾಗಶ್ರೀ ಅಟ್ಟತಾಳ) ಕಂಜನೇತ್ರೆ ಶುಭ ಮಂಜುಳಗಾತ್ರೆ ಕುಂಜರದಂತೆ ಗಮನೆ ರಂಜಿತಾಗಿ ನಿರಂಜನಾಂಗಿ ||ಪ|| ಧರೆಯ ಮ್ಯಾಲೆ ಹಿರಿಯಳು ನಾ - ನಿರಲು ಲಜ್ಜೆ ತೊರೆದು ನೀನು ಸರಸವಾಡೋರೆ ಮುರಹರನ ಕರೆದು ಭಾಮಿನಿ ಸುಗುಣೆ ಕಾಮಿನಿ ||೧||| ಪತಿಯ ಪ್ರೀತಿ ನನ್ನ ಮ್ಯಾಲೆ ಅತಿಶಯ ಇರಲು ಜ್ಯೇಷ್ಠ ಸತಿಯಳೇನೇ ನೀನು ನೋಡು ಮತಿಯ ರುಗ್ಮಿಣಿ ಸುಪದ್ಮಗಂಧಿನಿ ||೨|| ಒಂದು ಕಾಲದಲ್ಲಿ ದಾಸಿ- ಯಿಂದ ಪತಿಯು ಸರಸವಾಡಲು ಬಂದಳೇನೇ ಅರಸಿ ಸಮ- ಳೆಂದು ಭಾಮಿನಿ ಸುಗುಣೆ ಕಾಮಿನಿ ||೩|| ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡ ಶ್ರೀಶನ ದಯರಾಶಿ ಇರಲು ದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ ||೪|| ಸಾರೆ ಕೃತ್ಯ ವಾರೆ ಮಾಡಿ ದ್ವಾರಾವತಿಯಿಂದ ಎನ್ನ ಸಾರೆ ಬಂದ ಪ್ರೀತಿಯು [ಅ- ಪಾರೆ] ಭಾಮಿನಿ ಸುಗುಣೆ ಕಾಮಿನಿ ||೫|| ಕಡಲಶಾಯಿ ತಡೆದರಿನ್ನು ದಿಡುಗು ದೇಹ ಬಿಡುವೆನೆಂಬೊ ನುಡಿಯ ಕೇಳಿ ಪಿಡಿದನೆ ಬಿಡದೆ ರುಗ್ಮಿಣಿ ಸುಪದ್ಮಗಂಧಿನಿ ||೬|| ಮಂದರಧರನು ಪ್ರೀತಿ- ಯಿಂದ ನಿನ್ನ ಪಡೆದನೇನೆ ಒಂದು ಮಣಿಯ ಕಾರಣದಿ ಬಂದೆ ಭಾಮಿನಿ ಸುಗುಣೆ ಕಾಮಿನಿ ||೭|| ಸುಮ್ಮನೆ ಬಂದವಳಿಗೆ ಬ್ರಹ್ಮ ಲಗ್ನದಿ ಬಂದೆನಗೆ ಸಾಮ್ಯವೇನೆ ಯಾಕೆ ನಿನಗೆ ಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ ||೮|| ಮಾನಾದಿ ಭಕ್ತಿಯು ಕನ್ಯಾ- ದಾನವು ಲೋಕದೊಳಗುಂಟು ಏನು ನಿನ್ನ ತಾತ ಕೊಟ್ಟ ದೀನ ಭಾಮಿನಿ ಸುಗುಣೆ ಕಾಮಿನಿ ||೯|| ಎನ್ನ ಹಂಗದೆಂದು ಪ್ರ- ಸನ್ನ ಕೇಳಿ ಶತಧನ್ವನ ಬೆನ್ನಟ್ಟಿ ಕೊಂದನೆ ನೀ- ಚನ್ನ ರುಗ್ಮಿಣಿ ಸುಪದ್ಮಗಂಧಿನಿ ||೧೦|| ವೀರ ಅರಸರ ಸ್ವಭಾವ ಚೋರರ ಕೊಲ್ಲಬೇಕೆಂಬೋ ಸಾರ ಪ್ರೀತಿಯದರಿಂದ ತೋರೆ ಭಾಮಿನಿ ಸುಗುಣೆ ಕಾಮಿನಿ ||೧೧|| ಇಂದ್ರಾದಿ ದೇವತೆಗಳೊಳು ಸಾಂದ್ರಯುದ್ಧವನ್ನೆ ಮಾಡಿ ವೀಂದ್ರ [ಗ] ಎನಗೆ ಪಾರಿಜಾತ ತಂದ ರುಗ್ಮಿಣಿ ಸುಪದ್ಮಗಂಧಿನಿ ||೧೨|| ವರದರಂಗ ಕರದೊಳೆನ್ನ ಸುರಪುಷ್ಪವಿರಲು ನಿನ್ನ [ತ್ವರೆ] ಕ್ಲೇಶ ನೋಡಿ ತಂದ ತರುವ ಭಾಮಿನಿ ಸುಗುಣೆ ಕಾಮಿನಿ ||೧೩|| ನಿಜಳೆಂದು ರಂಗನು ಎನ್ನ ವಿಜಯಯಾತ್ರೆಯಲ್ಲಿ ತನ್ನ ಭುಜಗಳಿಂದಾಲಿಂಗಿಸಿದ ಸುಜನೆ ರುಗ್ಮಿಣಿ ಸುಪದ್ಮಗಂಧಿನಿ ||೧೪|| ಅರಸರ ಸ್ವಭಾವ ತಮ್ಮ ಅರಸೇರ ಮನೆಯೊಳಗಿಟ್ಟು ಸರಸ ದಾಸೇರಿಂದ್ಹೋಗೋದು ಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ ||೧೫|| ಸಾರವಚನ ಕೇಳಿ ಭಾಮೆ ಮೋರೆ ಕೆಳಗೆ ಮಾಡುತಿರಲು ನಾರಿ ರುಗ್ಮಿಣಿ ಭಾಮೆಯರನ್ನು ವೀರ ಕರೆದನು ತಾ ಸೇರಿ ಮೆರೆದನು ||೧೬|| ಮಂಗಳಾಂಗ ಮಹಿಮ ಕೇಶವಾ- ಲಿಂಗಿಸಿದ ಭೈಷ್ಮಿಯನ್ನು ತುಂಗ ಗುಣ ಗೋಪೀರಮಣ ರಂಗವಿಠಲನು ಅನಂಗಜನಕನು ||೧೭||
ದಾಸ ಸಾಹಿತ್ಯ ಪ್ರಕಾರ
ಬರೆದವರು