ಒಪ್ಪಿಸಸಲ್ಲದೊ ಎನ್ನೊಡೆಯನಾಗಿ
( ರಾಗ ಶಂಕರಾಭರಣ ಛಾಪು ತಾಳ)
ಒಪ್ಪಿಸಸಲ್ಲದೊ ಎನ್ನೊಡೆಯನಾಗಿ, ಎನ್ನ
ತಪ್ಪುಗಳ ಕಾಯಬೇಕು ಅಪಾರಮಹಿಮನೆ ||ಪ||
ಅರಿಷಡ್ವರ್ಗಗಳೆಲ್ಲ ಅವರೊಳಗಿದ್ದು
ಪರಿಪರಿಯಿಂದ ಎನ್ನ ಬಾಧಿಸುತಲಿದೆ
ಪರರ ಕೈ ಕೊಟ್ಟರಿನ್ನು ಪಾಲಿಪರಾರಯ್ಯ
ದುರಿತಾದುರಿತಗಳ ಪರಿಹರಿಸಯ್ಯ ||
ಜೀವ ನಿನ್ನದು ಎಂದು ಜಿತನಾಗಿ ಮನದಲ್ಲಿ
ಭಾವಜನಯ್ಯ ಎನ್ನ ಪಾಲಿಸಬೇಕೊ
ಧಾವತಿ ಪಡುವೆನೆ ದಯ ಮಾಡೋ ಶ್ರೀಹರೇ ಎ-
ನ್ನಾವ ಜನ್ಮದಲೆನ್ನ ಆಳಿದವನಲ್ಲವೆ ||
ನಿನ್ನವನಲ್ಲವೆ ನಾನು ಎನ್ನವನಲ್ಲವೆ ನೀನು
ಘನ್ನ ಮಹಿಮನೆ ಪಾಲಿಸಬೇಕೈ
ಇನ್ನು ಮಾಡೋದು ಚೆನ್ನಲ್ಲ ಪುರಂದರವಿಠಲ
ಸನ್ಮಾನದಿಂದಲಿ ಎನ್ನನು ಸಲಹಬೇಕೈ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments