ಒಂದೇ ನಾಮವು ಸಾಲದೆ
(ರಾಗ ಕಲ್ಯಾಣಿ ಅಟ ತಾಳ)
ಒಂದೇ ನಾಮವು ಸಾಲದೆ, ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವು-
ದೆಂದು ವೇದಂಗಳಾನಂದದಿ ಸ್ತುತಿಸುವ ||ಅ.ಪ||
ಉಭಯ ರಾಯರು ಸೇರಿ
ಮುದದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನಕಕ್ಷಯ ವಸ್ತ್ರವನಿತ್ತ ||
ಹಿಂದೊಬ್ಬ ಋಶಿ ಪುತ್ರ-
ನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||
ಕಾಶಿಯ ಪುರದೊಳಗೆ
ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments