ಒಂದೇ ನಾಮದಲಡಗಿದವೋ
(ರಾಗ ಆನಂದಭೈರವಿ ಆದಿ ತಾಳ)
ಒಂದೇ ನಾಮದಲಡಗಿದವೋ, ಅಡಗಿದವೋ ||ಪ||
ಆನಂದದಿಂದುದಿಸಿರುವ ಅಖಿಳ ವೇದಗಳು ||ಅ.ಪ||
ಒಂದೇ ನಾಮವು ಪ್ರಹ್ಲಾದನ್ನ ಕಾಯಿತು, ಮ-
ತ್ತೊಂದು ನಾಮವು ಅಜಾಮಿಳನ ಸಲಹಿತು
ತಂದೆ ತಾಯಿಯು ಬಿಟ್ಟ ಕಂದ ಧ್ರುವರಾಯಗಾ-
ನಂದದ ಪದವನಿತ್ತಾನಂತ ಗುಣವೆಲ್ಲ ||
ಮತ್ಸ್ಯಾದ್ಯನಂತಾವತಾರ ಅವತಾರ
ಸ್ವಚ್ಛಾದಷ್ಟಾದಶ ಪುರಾಣ ಸಾರ
ಕಚ್ಛಪನಾಗಿ ಮೂಜಗಕೆ ಆಧಾರ
ಸ್ವೇಚ್ಛೆಯಿಂದಲಿ ಹರಿ ಮಾಡೋ ವ್ಯಾಪಾರ||
ಒಬ್ಬರೀತಕೆ ಸಮರಿಲ್ಲ ಮಿಗಿಲಿಲ್ಲ
ಅಬ್ಬರದಲಿ ಸಲಹುವ ಜಗವೆಲ್ಲ
ಕಬ್ಬುಬಿಲ್ಲನ ಪಿತ ಪುರಂದರ ವಿಠಲ ವೈ
ದರ್ಭೀಯ ರಮಣನ ವರ ಸುಗುಣಗಳೆಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments