ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು

(ರಾಗ ಭೈರವಿ ಝಂಪೆತಾಳ) ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ||ಪ|| ವಾಸುದೇವನೆ ಎನ್ನ ಈಸುದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು ದಾಸಿನವು ನಿನಗಾಯಿತು ಮೋಸ ಯೋಚಿಪರೆ ||೧|| ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗೆಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ ||೨|| ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಆಡವಿಯ ಒಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ ||೩|| ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ ||೪|| ಇನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಮುನ್ನ ಮಾಡಿದ ಕರ್ಮ ಬೆನ್ನ ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ ||೫|| ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸ ಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ ||೬|| ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈಪಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿದದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹ ತಿಮ್ಮಪ್ಪ ||೭|| -- ರಚನೆ ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು