ಏನು ಮಾಡಿದರೇನು ಹಿಂದಿನ ಕರ್ಮಫಲ

ಏನು ಮಾಡಿದರೇನು ಹಿಂದಿನ ಕರ್ಮಫಲ

( ರಾಗ ಮುಖಾರಿ. ಝಂಪೆ ತಾಳ) ಏನು ಮಾಡಿದರೇನು ಹಿಂದಿನ ಕರ್ಮಫಲ ತಾನು ಮಾಡಿದ ಕರ್ಮ ತನಗಲ್ಲದೆ ||ಪ|| ಮರಳಿ ಮರಳಿ ನೀರಿನೊಳಗೆ ಪೊಕ್ಕರು ಇಲ್ಲ ಹೊರೆ ಹೊತ್ತು ತಲೆಪರಟಿಯಾದರಿಲ್ಲ ಭರದಿಂದ ಭೂಮಿಯನು ತೋಡಿ ನೋಡಿದರಿಲ್ಲ ಪರರಿಗೆ ಬಾಯ್ದೆರೆದು ಪಲ್ಕಿರಿದರಿಲ್ಲ || ಬಲು ದೇಹವನು ಹ್ರಸ್ವ ಮಾಡಿ ಬೇಡಿದರಿಲ್ಲ ಕುಲಗೇಡಿ ತಾನಾಗಿ ತಿರುಗಿದರಿಲ್ಲ ತಲೆಯು ಜಡೆಗಟ್ಟಿ ಅರಣ್ಯ ಸೇರಿದರಿಲ್ಲ ಕೊಳಲೂದಿ ತುರುಗಳನು ಕಾಯ್ದರಿಲ್ಲ || ಧೀರತನವನು ಬಿಟ್ಟು ದಿಗಂಬರಾದರು ಇಲ್ಲ ಮೀರಿ ರಾವುತನಾಗಿ ಹೋರಿದರಿಲ್ಲ ಧಾರಣಿಯೊಳಪ್ರತಿಮ ಪುರಂದರವಿಠಲನೆ ಆರಿಗಳವಯ್ಯ ವಿಧಿಮೀರಿ ಬಾಳುವರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು