ಏನು ಬೇಡಲಿ ನಿನ್ನ ಬಳಿಗೆ ಬಂದು
ಏನು ಬೇಡಲಿ ನಿನ್ನ ಬಳಿಗೆ ಬಂದು
ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ || ಪ ||
ಜನನಿಯ ಕೊಡು ಎಂದು ಜಯವಂತ ಬೇಡುವೆನೆ
ಜನನಿ ಏನಿತ್ತಳಾ ಧ್ರುವರಾಜಗೆ
ಜನಕನ ಕೊಡು ಎಂದು ಜಗದೀಶ ಬೇಡುವೆನೆ
ಜನಕನೇನಿತ್ತನಾ ಪ್ರಹ್ಲಾದಗೆ || ೧ ||
ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ
ಅನುಜನೇನಿತ್ತನಾ ವಾಲಿಗೆ
ಧನವನೇ ಕೊಡು ಎಂದು ದೈನ್ಯದಲಿ ಬೇಡುವೆನೆ
ಧನ ಗಳಿಸಿದ ಸುಯೋಧನನೇನಾದ ಕೊನೆಗೆ || ೨ ||
ಸತಿಯಳ ಕೊಡು ಎಂದು ಮತಿವಂತ ಬೇಡುವೆನೆ
ಸತಿಯಿಂದ ದುನ್ಯಾಮಕನೇನಾದ ಕೊನೆಗೆ
ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ
ಸುತರಿಂದ ಧೃತರಾಷ್ಟ್ರ ಗತಿಯೇನು ಕಂಡ || ೩ ||
ಬೇಡುವೆನು ನಾನಿಂದು ಬೇಡತಕ್ಕುದೆ ದೇವಾ
ನೀಡೆನೆಂಬುದು ನಿನ್ನ ಮನದೊಳಿತ್ತೆ
ಮೂಡಲಗಿರಿವಾಸ ಗೋಪಾಲವಿಠಲ ಪರರ
ಬೇಡದಂತೆ ಎನ್ನ ಮಾಡಯ್ಯ ಹರಿಯೆ || ೪ ||
ದಾಸ ಸಾಹಿತ್ಯ ಪ್ರಕಾರ
ಬಗೆ
- Log in to post comments