ಏನು ಬಂದ್ಯೋ ಜೀವವೇ ವ್ಯರ್ಥವಾಗಿ
( ರಾಗ ಕೇದಾರಗೌಳ. ಅಟ ತಾಳ)
ಏನು ಬಂದ್ಯೋ ಜೀವವೇ ವ್ಯರ್ಥವಾಗಿ
ಜ್ಞಾನದಿಂದಲಿ ತಿಳಿದು ಪರಗತಿಯನು ಕೂಡು ||ಪ||
ದಾನವ ಮಾಡಲಿಲ್ಲ ಧರ್ಮವ ಮಾಡಲಿಲ್ಲ
ದೀನನುಡಿಗಳಿಲ್ಲ ದಾಕ್ಷಿಣ್ಯವಿಲ್ಲ
ಜ್ಞಾನಿ ದಾಸ ಜನರಾ ಸಂಗದೊಳಿರಲಿಲ್ಲ
ಮನ ನಿರ್ಮಲದಿ ಕ್ಷಣವು ಇರಲಿಲ್ಲ ||
ಸತಿಪುರುಷರಾಗಿ ಸಂತೋಷದಿಂದಿರಲಿಲ್ಲ
ಯತಿಯಾಗಿ ತೀರ್ಥಯಾತ್ರೆಯ ಮಾಡಲಿಲ್ಲ
ಶ್ರುತಿ ಪುರಾಣಗಳನ್ನು ಕಿವಿಗೊಟ್ಟು ಕೇಳಲಿಲ್ಲ
ಮೃತಿಕಾಲ ಬಂದು ದಿನ ವ್ಯರ್ಥ ಹೋಯಿತಲ್ಲ ||
ಉಂಡುಟ್ಟು ಸುಖವಿಲ್ಲ ಕಾಯ ಪರಿಣಾಮವಿಲ್ಲ
ಕೊಂಡು ಕೊಟ್ಟು ಪರಸೇವೆ ಬಿಡಲಿಲ್ಲ
ದಂದುಗಳ ಸಂಸಾರ ಮಾಯಾಪಾಶಕೊಳಗಾದೆ
ತಂದೆ ಶ್ರೀ ಪುರಂದರ ವಿಠಲನ ನೆನೆ ಕಂಡ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments