ಏನಾಯಿತೋ ಈ ಜನಕೆ
( ರಾಗ ಬಿಲಹರಿ. ಅಟ ತಾಳ)
ಏನಾಯಿತೋ ಈ ಜನಕೆ
ಮೌನವನು ಹಿಡಿದು ಮರೆತರು ಹರಿಯ ||ಪ||
ನಾಲಿಗೆ ಮುರಿದಿತೊ ನೆಗ್ಗಿಲ ಕೊನೆಮುಳ್ಳು
ಬಾಲಕತನದಲಿ ಭೂತ ಹಿಡಿಯಿತೊ
ಮೇಲೆ ಕೆಳಗಿನ ತುಟಿ ಎರಡು ಒಂದಾಯಿತೊ
ಕಾಲ ಮೃತ್ಯುವು ಬಂದು ಕಂಗೆಡಿಸಿತೊ ||
ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ
ಕಟಕರಿಸಿ ನಾಲಿಗೆ ಕಡಿದ್ಹೋಯಿತೋ
ಹಟದಲ್ಲಿ ಹರಿಯನ್ನು ನೆನೆಯದೆ ಇರುವಂಥ
ಕುಟಿಲ ಚಂಚಲ ಮನಸು ಕೂಡಿ ಬಾಧಿಸಿತೊ ||
ಹರಿಯೆಂದರಿವರ ಶಿರ ಹರಿದು ತಾ ಬೀಳುವುದೆ
ಹರಿನಾಮ ಹಣೆಯಲ್ಲಿ ಬರೆದಿಲ್ಲವೆ
ವರದ ಪುರಂದರವಿಠಲರಾಯನ್ನ
ಸ್ಮರಿಸಿದರೆ ಸಿಡಿಲೆರಗಿ ಕೊಲ್ಲುವುದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments