ಏಕೇ ಮೂರ್ಖನಾದ್ಯೋ
(ರಾಗ ಕಾಂಭೋಜ್. ಚಾಪು ತಾಳ)
ಏಕೇ ಮೂರ್ಖನಾದ್ಯೋ , ಮನವೆ, ಏಕೇ ಮೂರ್ಖನಾದ್ಯೋ
ಕಾಕು ಬುದ್ಧಿಯ ಬಿಟ್ಟು ಲೋಕನಾಯಕನ ನೆನೆ ಕಂಡ್ಯ ಮನವೆ
ಹೆಂಡಿರು ಮಕ್ಕಳು ನಿನ್ನವರೆಂದು
ರೊಕ್ಕವಾದರು ಗಳಿಸಿ ಕೊಂಡು
ಸೊಕ್ಕಿನಿಂದ ತಿರುಗುವೆಯೇನೋ ಮನುಜ
ರಕ್ಕಸನ ದೂತರು ಬಂದು
ಲೆಕ್ಕವಾಯಿತು ಹೊರಡು ಎನಲು
ನಕ್ಕು ನಗುವರೆಲ್ಲ ಬಿಡಿಸುವರೇನೊ ಮನುಜ
ದಾನಧರ್ಮವನು ಮಾಡಿ
ಜ್ಞಾನಿಗಳ ಸೇವೆಗೈದು
ಜಾನಕೀಪತಿಯ ಪಾಡೊ ಜಾಣ ಮನವೆ
ಸಾಧುಜನರ ಸಂಗವ ಮಾಡು
ಭೇದಾಭೇದವ ತಿಳಿದು ನೋಡು
ವಾದ ಬುದ್ಧಿಯ ಮಾಡದಿರು ಮನವೆ
ಅರಿಷಡ್ವರ್ಗದಾಸೆಯ ಬಿಟ್ಟು
ಪುರಂದರ ವಿಠಲನ ಧ್ಯಾನವ ಮಾಡಿ
ಹರಿಯ ಸೇರುವ ದಾರಿಯನ್ನು ನೋಡೊ ಮನವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments