ಏಕೆ ನಿರ್ದಯನಾಗುವೆ
( ರಾಗ ಕಲ್ಯಾಣಿ. ಅಟ ತಾಳ)
ಏಕೆ ನಿರ್ದಯನಾಗುವೆ, ರಂಗಯ್ಯ ರಂಗ
ಏಕೆ ನಿರ್ದಯನಾಗುವೆ ||ಪ||
ಏಕೆ ನಿರ್ದಯ ರಂಗ, ಕಾರುಣ್ಯಪತಿಯೆನ್ನ
ಸಾಕುವುದು ನಿನ್ನ ಭಾರ ಪಾಕಶಾಸನವಂದ್ಯ ||ಅ||
ಅರಿತು ಪಾಡುವೆನೆಂದರೆ, ರಂಗಯ್ಯ ನಿನ್ನ
ಅರಿತವರಾರಯ್ಯ
ಅರಿಯಬಾರದ ನಿನ್ನ ಹೊಂದುವುದ್ಹ್ಯಾಂಗಯ್ಯ
ಅರಿಯದವನು ನಾನು, ದಾರಿ ತೋರಿಸೋ ನೀನು ||
ಸುಲಭನು ನೀನೆಂದು ನಿನ್ನ ಬಳಿಗೆ
ಬಳಲಿ ಬಂದೆನೊ ದೊರೆಯೆ
ಸುಲಭ ನೀನಾದರೆ ಒಲಿದು ಸಲಹಬೇಕೊ
ಚೆಲುವ ಮೂರುತಿ ಕೃಷ್ಣ ಎನ್ನ ಬಿಟ್ಟಗಲದೆ ||
ಎಷ್ಟು ದಿವಸ ಹರಿಯೆ , ಈ ಮುಚ್ಚಾಟ
ಕಷ್ಟಪಡಿಸಬೇಡವೊ
ಎಷ್ಟಿದ್ದರು ನಾ ಮಾಡಿದಪರಾಧ
ಅಷ್ಟು ಮರೆತು ಎನ್ನ ಇಷ್ಟದೆ ಕೈ ಪಿಡಿಯೊ ||
ಮಾತು ಮಾತಿಗೆ ನಿನ್ನ ನಾಮಗಳನ್ನು
ಹೇ ತಾತ ನುಡಿದೆನಲ್ಲದೆ
ನೀತಿಯ ಪೇಳಯ್ಯ ವಾತಜನಯ್ಯನೆ
ದೂತನು ನಾನಯ್ಯ ದೂರ ಮಾಡದೆ ಕಂಡ್ಯ ||
ನಂಬಿಕೆ ಇಲ್ಲದಂಥ ಡಿಂಭವ ಪಡೆದೆ
ಡಂಭಕ ಬೊಂಬೆಯಾದೆ
ಡಂಭತನವ ಬಿಡಿಸೊ ನಿನ್ನಂಘ್ರಿಯ ತೋರಿಸೊ
ಅಂಬುಜಾಕ್ಷ ತಂದೆ ಪುರಂದರವಿಠಲನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments