ಏಕೆ ದೂರುವಿರೇ ರಂಗಯ್ಯನ
(ಕಲ್ಯಾಣಿ ರಾಗ ಅಟ್ಟತಾಳ/ ತ್ರಿಪುಟ ತಾಳ)
ಏಕೆ ದೂರುವಿರೇ ರಂಗಯ್ಯನ
ಏಕೆ ದೂರುವಿರೇ ||ಪ||
ಸಾಕು ನಿಮ್ಮ ದೂರ ಬಲ್ಲೆನು
ಈ ಕುವರನಾ ಕೃತ್ಯ ಮಾಳ್ಪನೆ ||ಅ.ಪ||
ದಟ್ಟಡಿಯಿಡಲರಿಯ ಗೋವತ್ಸವ
ಬಿಟ್ಟು ಚಲಿಸಬಲ್ಲನೆ
ಘಟ್ಟಿಯಾಗಿ ಗೊತ್ತಿನಲ್ಲಿ
ಕಟ್ಟಿನೊಳು ಕಟ್ಟಿದ್ದ ಕರುಗಳ
ಬಿಟ್ಟನೇ ಈಕೃಷ್ಣನ ಮೇ-
ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ||೧||
ಕೆನೆಹಾಲು ಬೆಣ್ಣೆಯನು ಇತ್ತರೆ ಆ
ದಿನವೊಲ್ಲನು ಊಟವ
ಮನೆಮನೆಗಳನು ಪೊಕ್ಕು
ಬೆಣ್ಣೆ ಪಾಲ್ಮೊಸರನ್ನು ತಿನ್ನುತ
ವನಿತೆಯರ ಕೂಡಾಡಿದನೆಂ-
ದೆನಲು ನಿಮಗೆ ನಾಚಿಕಿಲ್ಲವೆ ||೨||
ಪಾಲು ಮೊಸರು ಬೆಣ್ಣೆಯು ಇಲ್ಲವೆ ನ-
ಮ್ಮಾಲಯದೊಳು ನೋಡಿರೆ
ಹೇಳುವರೆ ಈ ಠೌಳಿಗಳ ಗೋ-
ಪಾಲಬಾಲನ ನೋಡಿ ಸೈಸದೆ
ಬಾಳುವಿರ ಭವ ಜಲಧಿಯಿಂದಲಿ
ತೇಲಿಸುವನೆ ರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments