ಏಕೆನ್ನೊಳಿಂತು ಕೃಪೆಯಿಲ್ಲ
(ಆಗ ಮುಖಾರಿ. ಝಂಪೆ ತಾಳ)
ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ
ಕಾಕು ಮಾಡದೆ ಕಾಯೊ ಸಂಗದೊಳು ಬಳಲಿದೆನು
ಕಂದರ್ಪಬಾಧೆಯಿಂ ಮಾನಿನಿಯರೊಶನಾಗಿ
ಮಂದಮತಿಯಿಂದ ನಾ ಮರುಳಾದೆನು
ಸಂದಿತೈ ಯೌವನವು ಬುದ್ಧಿ ಬಂದಿತು ಈಗ
ಸಂದೇಹಬಡದೆ ನೀ ಕರುಣಿಸೈ ಎನ್ನ
ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡ ಮೋಚಿದೆ ನಾನು ಇನ್ನಾರು ಗತಿಯೆನಗೆ
ಪುಂಡರೀಕಾಕ್ಷ ನೀ ಪಾಲಿಸೈ ತಂದೆ
ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ
ಕೆಟ್ಟ ಮೇಲೆ ಅರಿವು ಬಂದಿತಯ್ಯ
ನೆಟ್ಟನೆ ಪುರಂದರ ವಿಟ್ಠಲನೆ ಕೈ ಬಿಡದೆ
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments