ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ
( ರಾಗ ಕಾಂಭೋಜ. ಝಂಪೆ ತಾಳ)
ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ ||ಪ||
ಪಡೆದಷ್ಟೆ ಅಲ್ಲದೆ ಬೇರೆ ಬಯಸಿದರಿಲ್ಲ ||ಅ||
ಯಾರಾರ ಮನೆಗಳಿಗೆ ಹೋಗಿ ಬಂದರು ಇಲ್ಲ
ಊರನಾಳುವ ದೊರೆಯ ಸೇರಿದರಿಲ್ಲ
ನೀರೊಳಗೆ ತಾ ಮುಳುಗಿ ಜಪವ ಮಾಡಿದರಿಲ್ಲ
ಹೇರಳ ವಿದ್ಯೆಗಳ ಕಲಿತರಿಲ್ಲ ||
ತನ್ನೊಡನೆ ಪುಟ್ಟಿಹರ ಭಾಗ್ಯವು ತನಗಿಲ್ಲ
ಹೆಣ್ಣಿನ ದೆಸೆಯಿಂದ ಬಾಹೊದಿಲ್ಲ
ಅನ್ಯರನು ನೋಡಿ ತಾ ಕರಗಿ ಕೊರಗಿದರಿಲ್ಲ
ತನ್ನ ಮಕ್ಕಳು ಪಡೆದ ಪುಣ್ಯ ತನಗಿಲ್ಲ ||
ಬಿಟ್ಟಿ ದುಡಿದು ಬಾಯ ಬಿಟ್ಟು ಬೇಡಿದರಿಲ್ಲ
ಕಟ್ಟಾಳು ತಾನಾದರೇನು ಫಲವಿಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲನ
ಮುಟ್ಟಿ ಪೂಜಿಸಿದರುಣಲುಂಟು ಉಡಲುಂಟು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments