ಎರಡೂ ಒಂದಾಗದು ರಂಗ
( ರಾಗ ಶ್ರೀ. ಅಟ ತಾಳ)
ಎರಡೂ ಒಂದಾಗದು ರಂಗ ||ಪ||
ಎರಡೂ ಒಂದಾಗದು ಎಂದೆಂದಿಗು ರಂಗ ||ಅ||
ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು
ಒಂದೆ ಗೂಡಿನಲ್ಲಿ ಇರುತಿಹವು
ಒಂದು ಪಕ್ಷಿ ಫಲಗಳನುಂಬುದು ಮ-
ತ್ತೊಂದು ಫಲಂಗಳನುಣ್ಣದು ರಂಗ ||
ಹಲವು ಕೊಂಬೆಗೆ ಒಂದು ಹಾರಿತು , ಒಂದು
ಹಲವು ಕೊಂಬೆಗೆ ಹಾರಲರಿಯದು
ಹಲವನೆಲ್ಲ ಒಂದು ಬಲ್ಲುದು, ಒಂದು
ಹಲವನೆಲ್ಲ ಅರಿಯದು ರಂಗ ||
ನೂರೆಂಟು ಕೊಂಬೆಗೆ ಹಾರಿತು ಅದು
ಹಾರಿ ಮೇಲಕ್ಕೇರಿ ಮೀರಿತು
ಮೀರಿ ಪುರಂದರವಿಟ್ಠಲ ನಿಮ್ಮನು
ಸೇರಿ ಸುಖಿಯಾಗಿ ನಿಂತಿದು ರಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments