ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ
(ಭೈರವಿ ರಾಗ ದಾದರಾ ತಾಳ)
ಎನ್ನಪರಾಧವೇನು ?
ನಿನ್ನ ಸೂತ್ರಾಡಿಸಿಧಾಂಗ ಆಡುವೆ ಹರಿ ||ಪ||
ಆಡಿಸಿದರಾಡುವೆ ನೋಡಿಸಿದರೆ ನೋಡುವೆ
ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗೆ ||೧||
ನಡಿಸಿದರೆ ನಡೆವೆ ಕೂಡಿಸಿದರೆ ಕೂಡುವೆ
ನುಡಿಸಿದರೆ ನಾ ನುಡಿವೆ ಚೇತಿಸಿದಂತೆ ||೨||
ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ
ಇಡಿಸಿದರೆ ನಾ ಇಡುವೆ ಸರ್ವ ಭೂಷಣಾ ||೩||
ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ
ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ ||೪||
ಕಲಿಸಿದರೆ ಕಲಿವೆ ಬಲಿಸಿದರೆ ಬಲಿವೆ
ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗೆ ||೫||
ನೇಮಿಸಿದರೆ ನೀ ಒಂದು ನಾ ಮಾಡುವುದು ಒಂದು
ನಿಮಿತ್ಯ ಮಾಡಿ ದೋರುದು ಸೋಜಿಗಿದೊಂದು ||೬||
ಎನ್ನ ಬಾಹ್ಯಾಂತ್ರ ಪೂರ್ಣ ಚೆನ್ನಾಗಿರೆ ನೀ ಕರುಣಾ
ಚೆನ್ನ ಮಹಿಪತಿಗಭಿಮಾನಾ ನಿನ್ನದೇ ಅನುದಿನಾ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments