ಊರ ದೇವರ ಮಾಡಬೇಕಣ್ಣ
( ರಾಗ ನಾದನಾಮಕ್ರಿಯೆ ಅಟತಾಳ)
ಊರ ದೇವರ ಮಾಡಬೇಕಣ್ಣ, ತನ್ನೊಳಗೆ ತಾನೆ, ಊರ ದೇವರ ಮಾಡಬೇಕಣ್ಣ ||ಪ||
ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಸ್ಮೃತಿಗಳು
ದ್ವಾರಗಳ ಒಂಭತ್ತು ಮುಚ್ಚಿ ನಿಲ್ಲಿಸಿ ಧ್ಯಾನ ಭ್ರೂಮಧ್ಯದಿ ||ಅ|
ಎಷ್ಟು ಯುಗಗಳು ತೀರಿ ಹೋಯಿತಣ್ಣ, ದೇವರ ಮಾಡದೆ
ಕಷ್ಟದಿಂದ ನೊಂದೆ ಕಾಣಣ್ಣ
ಅಷ್ಟದಳದ ಕಂಭ ನಿಲ್ಲಿಸಿ , ನಷ್ಟ ಬರುವ ಕಾಲದಲ್ಲಿ
ಕೆಟ್ಟ ದೈವಕ್ಕಾಗಿ ನೀನು , ದುಷ್ಟ ಕೋಣನ ಶಿರವ ತರಿದು ||
ನಾನೇ ಎಂಬೋ ಮೇಕೆ ಹೋತಣ್ಣ, ಅದಕ್ಕೆ ತಕ್ಕ
ಜ್ಞಾನವೆಂಬ ಪೋತ ರಾಜಣ್ಣ
ತಾನೆ ಎಂಬೋ ಭಲ್ಲೆ ಹಿಡಿದು, ಹೀನ ಹೋತಿನ ಸೀಳಿ ಬಿಸುಟು
ಜ್ಞಾನ ಗುಡಿಸಲು ಸೂರೆಗೊಂಡು , ತಾನೆ ಬೆಳಗೋ ಜ್ಯೋತಿ ನಿಲ್ಲಿಸಿ ||
ಕರ್ತವೆಂಬೋ ಕ್ಲೇಶ ಕುರಿಯಣ್ಣ, ಅದನ್ನು ತಂದು
ಕಟ್ಟಿ ತಲೆಯನೆ ಕುಟ್ಟಬೇಕಣ್ಣ
ಅಷ್ಟ ವಿಧದ ಕುರಿಗಳನ್ನು , ಕಟ್ಟಿ ತಲೆಯನೆ ಚೆಂಡನಾಡಿ
ಹುಟ್ಟಿ ತಿರುಗೋ ಕೋಳಿಯನ್ನು , ಕುಟ್ಟಿ ಚೂರಿ ಹಾಕುತಲಿ ||
ನಾಳೆ ನೋಡುವೆನೆನ್ನ ಬೇಡಣ್ಣ, ಕೇಳಣ್ಣ ನಿನ್ನ
ಬಾಳುಯೆಂತೋ ನೀನೆ ನೋಡಣ್ಣ
ನಾಳೆ ನಾಡದು ಎಂದು ಹೀಗೆ, ಬಾಳುವ ಕಾಲದಿ ಯಮನು
ಕೋಳಿ ಪಿಳ್ಳೆಯಾಡುವಾಗ, ಹಾಳಿ ಹದ್ದಿನಂತೆ ಒಯ್ಯುವ ||
ಹೆಂಡಿರು ಮಕ್ಕಳು ಸುಳ್ಳಣ್ಣ, ಕೇಳಣ್ಣ ನಿನ್ನ
ಮಂಡೆ ತುಂಬ ಬಳಗ ಕಾಣಣ್ಣ
ತುಂಡನಾದ ಯಮನು ಬಂದು, ಮಂಡೆ ಮೇಲೆ ಹೊಯ್ಯುವಾಗ
ಹೆಂಡಿರು ಮಕ್ಕಳು ನಿನ್ನ, ಕಂಡು ಕಂಡು ಬಿಡಿಸೋದಿಲ್ಲ ||
ಮತ್ತೆ ಹೆಣ್ಣಿನ ನೋಡುವೆಯಲ್ಲೋ, ನೀ ಕಳಿಸಿದಂಥ
ಬುತ್ತಿಯನ್ನೆ ಉಂಬುವೆಯಲ್ಲೋ
ಮೃತ್ಯುವಿನ ಬಾಯಿಗೆ ನೀ, ತುತ್ತು ಆಗಿಹೋಗಬೇಡ
ತೊತ್ತಾಗಿ ಗುರುವಿಗೆ ನಿತ್ಯ, ಉತ್ತಮ ಸೇವೆಯನ್ನು ಮಾಡು ||
ಮುಂದೆ ಇಂಥ ಜನ್ಮ ಕಾಣಣ್ಣ, ಬಾರದೋ ನಿನಗೆ
ಮಂದಮತಿಯು ಆಗಬೇಡಣ್ಣ
ಹಿಂದಿನ ಕಷ್ಟದಗಿಂತ, ಮುಂದಿನ ಹೆಮ್ಮೆಯ ಮರೆತು
ತಂದೆ ಪುರಂದರವಿಠಲನ್ನ, ಹೊಂದಿ ನೀನು ಮುಕ್ತನಾಗೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments