ಊರಿಗೆ ಬಂದರೆ ದಾಸಯ್ಯ
( ರಾಗ ಹಿಂದುಸ್ಥಾನಿ ಕಾಪಿ ಆದಿತಾಳ)
ಊರಿಗೆ ಬಂದರೆ ದಾಸಯ್ಯ, ನಮ್ಮ
ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ||
ಕೇರಿಗೆ ಬಂದರೆ ದಾಸಯ್ಯ, ಗೊಲ್ಲ
ಕೇರಿಗೆ ಬಾ ಕಂಡ್ಯ ದಾಸಯ್ಯ ||ಅ||
ಕೊರಳೊಳು ವನಮಾಲೆ ಧರಿಸಿದನೆ, ಕಿರು-
ಬೆರಳಲಿ ಬೆಟ್ಟವನೆತ್ತಿದನೆ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡಿದಂಥ ದಾಸಯ್ಯ ||
ಕಪ್ಪು ವರ್ಣದ ದಾಸಯ್ಯ, ಕಂ-
ದರ್ಪನ ಪಿತನೆಂಬೊ ದಾಸಯ್ಯ
ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ
ಅಪ್ಪವ ಕೊಡುವೆನು ದಾಸಯ್ಯ ||
ಮುಂದೇನು ದಾರಿ ದಾಸಯ್ಯ, ಚೆಲ್ವ
ಪೊಂಗೊಳಲೂದುವ ದಾಸಯ್ಯ
ಹಾಂಗೆ ಪೋಗದಿರು ದಾಸಯ್ಯ, ಹೊ-
ನ್ನುಂಗುರ ಕೊಡುವೆನು ದಾಸಯ್ಯ ||
ಸಣ್ಣ ನಾಮದ ದಾಸಯ್ಯ, ನಮ್ಮ
ಸದನಕೆ ಬಾ ಕಂಡ್ಯ ದಾಸಯ್ಯ
ಸದನಕೆ ಬಂದರೆ ದಾಸಯ್ಯ, ಮಣಿ-
ಸರವನು ಕೊಡುವನು ದಾಸಯ್ಯ ||
ಸಿಟ್ಟು ಮಾಡದಿರು ದಾಸಯ್ಯ, ಸಿರಿ-
ಪುರಂದರವಿಟ್ಠಲದಾಸಯ್ಯ
ರಟ್ಟು ಮಾಡದಿರು ದಾಸಯ್ಯ, ತಮ್-
ಬಿಟ್ಟು ಕೊಡುವನು ದಾಸಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments