ಈಸಲಾರೆನೆ ಈ ಸಂಸಾರದಲಿ

ಈಸಲಾರೆನೆ ಈ ಸಂಸಾರದಲಿ

(ರಾಗ ನಾದನಾಮಕ್ರಿಯೆ ) ಈಸಲಾರೆನೆ ಈ ಸಂಸಾರದಲಿ, ಲೇಸು ಕಾಣೆನೆ ಇದರಲ್ಲಿ ಹೇ ಸಖಿಯೆ ಕೇಳೆ ||ಪ|| ಅತ್ತಿಗೆಯರು ಅತಿವ್ಯಭಿಚಾರಿಗಳಮ್ಮ , ಎಡೆ ಬಿಡದೆ ಎನ್ನ ಸುತ್ತಮುತ್ತ ಕಾದಿಹರೆ ನೋಡಮ್ಮ , ಅವರಂತೆ ಎನ್ನ ಚಿತ್ತದಲಿ ತಿಳಿದಿಹರೆ ಕೇಳಮ್ಮ , ಇವರೆಲ್ಲರ ಹಮ್ಮು ಒತ್ತಿ ಆಳುವರಿಲ್ಲೇ ದುಷ್ಕರ್ಮ , ಜೊತೆ ಹಾಕಿದ ಬ್ರಹ್ಮ || ದುರುಳರಾರ್ವರು ಭಾವಮೈದುನರೆ , ಇನ್ನೆಂಟು ಮಂದಿ ಕೊರಳ ಕೊಯ್ವ ಮಲಮಕ್ಕಳು ಇರುತಾರೆ , ಇನ್ಹತ್ತು ಮಂದಿ ನೆರೆಯ ಕೂಡಿ ಕರಕರೆಯ ಮಾಡುವರೆ , ನಾ ವಿವರಿಸಲಾರೆ ಸರಿಬಾರದ ಒಗತನ ಹಗರಣವೆ , ಹೇ ಸಖಿಯ ಕೇಳೆ || ಮಾವನೆಂಬುವನು ಮಾದಿಗನಂತಿಹನೆ , ನಾ ಮಾಡಲಿನ್ನೇನೆ ಝಾವಝಾವಕೆ ನೋವನು ನುಡಿಯುವನೆ , ಬಹು ತಾಮಸಿ ಕಾಣೆ ಠಾವು ಕದಲದೆ ಕುಳಿತಿಪ್ಪನು ಜಾಣೆ , ಬೈದರೆ ಫಲವೇನೆ ಆವಬಗೆಯಲಿ ಎನಗೆ ಸುಖ ಕಾಣೆ , ಹೇ ಸಖಿಯೆ ಕೇಳೆ || ಪತಿಯಾದರೆ ಪರದೇಶಿಯಂತಿಹನೆ , ಒಂದರೆಘಳಿಗಾದರು ಜೊತೆಯಲ್ಲಿದ್ದು ಮಾತಾಡುವ ಸುಖ ಕಾಣೆ , ಇವರೆಲ್ಲರ ತಪ್ಪಿಸಿ ಸುತರ ಪಡೆವ ಸುಖವಿಲ್ಲೆ ನಿನ್ನಾಣೆ , ಮತಿದೋರದೆ ಎನಗೆ ನುತಿಸುವೆ ಬೇಗದಿ ಪತಿಯೊಳು ನೀ ಪೇಳೆ , ಹೇ ಸಖಿಯೆ ಕೇಳೆ || ಕೋಪವು ಬಹಳ ಕುಲಗೇಡಿ ಅತ್ತೆಗೆ , ನಾ ಮಾಡಲಿನ್ನೇನೆ ಪಾಪಕ್ಕಂಜುವಳು ಪೂರೈಸಳು ಕೊನೆಗೆ , ಬಹುಪಾಪಿ ಕಾಣೆ ತಾಪಸರೆಂದರೆ ಆಗದು ಇವಳಿಗೆ , ಅವಿವೇಕಿ ಈಕೆ ಶ್ರೀಪತಿ ಪುರಂದರವಿಠಲಗೆ ನೀ ಪೇಳೆ , ಹೇ ಸಖಿಯೆ ಕೇಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು