ಈಗಲೆ ಭಜಿಸೆಲೆ ಜಿಹ್ವೆ

ಈಗಲೆ ಭಜಿಸೆಲೆ ಜಿಹ್ವೆ

(ರಾಗ ಸೌರಾಷ್ಟ್ರ ಆದಿತಾಳ) ಈಗಲೆ ಭಜಿಸೆಲೆ ಜಿಹ್ವೆ , ನೀ ಜಾಗುಮಾಡದೆ ಹರಿಯ ಪಾದಾಬುಜವ || ದೇಹಗೇಹ ಸಂಬಂಧಿಗಳು ನಿನ್ನ ಮೋಹಬದ್ಧನಾಗಿ ಭವದಿ ಕಟ್ಟುವರು ಆಹಾರ ಗುಹ್ಯೇಂದ್ರಿಯವೆಂಬೊ ಎರೆಡರ ವಿಹಾರದಲಿ ನೀನು ಮುಣುಗಿರದೆ ಮನ || ಮರಣವು ತೊಡದು ಮಡಗಿ, ನಿನ್ನ ತರುಣಿ ಪುತ್ರಮಿತ್ರರೆಲ್ಲರಳುತಿರಲು ಕೊರಳೊಳು ಗುರುಗುಟ್ಟುವಾಗ ನರ- ಹರಿಯ ಸ್ಮರಣೆ ನಿನಗನುಗೊಡದಲೆ ಮನ || ತಪ್ತಲೋಹದ ಮೆಲೊರಗಿಸಿ, ನಿನ್ನ ಕತ್ತರಿಸಿದ ಖಂಡ ಬೇಯ್ಸುವರು ನೆತ್ತಿಯ ಕೊರೆದು ನಾಲಿಗೆಯ ಹರಿವಾಗ ಚಿತ್ತಜನಯ್ಯನ ನೆನೆಗೊಡದಲೆ ಮನ || ಅಸಿಪತ್ರವನದರೊಳಗ್ಹೊಗಿಸಿ, ನಿನ್ನ ಬಿಸಿ ಬಿಸಿ ಖಂಡವ ಹೊರ ಹೊರಡಿಸಿ ಹಸಿಯ ನೆತ್ತರು ಬಸಿದು ಹೋಗುವಾಗ ಕುಸುಮನಾಭನ ನಾಮ ನೆನೆಯಗೊಡದಲೆ || ಕುಂಭಿಪಾಕದೊಳಗೆ ಕುದಿಸಿ, ನಿನ್ನ ಅಂಬುಮೊನೆಗಳಿಂದ ಸರ್ವಾಂಗ ಇರಿಸಿ ಅಂಬರಕ್ಹೋಗೆ ಕಾಗೆಯೆ ಕಚ್ಚಿ ಅಂಬುಜಾಕ್ಷನ ನಾಮ ನೆನೆಯಗೊಡದಲೆ || ದುರುಳ ಯಮನ ದೂತರಾರ್ಭಟಿಸಿ, ನಿನ್ನ ಉರಿವ ಗಾಜಿನ ಕಂಭಕೆ ತೆಕ್ಕೆಗೈಸಿ ಪರಿಭವದೊಳು ಬಳಲುವಾಗ ಹರಿ- ಪುರುಷೋತ್ತಮನ ನಾಮ ನೆನೆಯಗೊಡದಲೆ || ದುರಿತಕೋಟಿ ಪರಿಹರಿಸಿ , ನಿನ್ನ ನರಕದ ಬಾಧೆಗಳೆಲ್ಲ ತಪ್ಪಿಸುವ ಸಿರಿಪುರಂದರವಿಠಲನ್ನ ನೆರೆ ಹರುಷದಿ ನೀ ನೆನೆದು ಸುಖಿಯಾಗೋ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು