ಇರಬೇಕು ಹರಿದಾಸರ ಸಂಗ
(ರಾಗ ಕಾಂಭೋಜ ಅಟತಾಳ)
ಇರಬೇಕು ಹರಿದಾಸರ ಸಂಗ
ಪರಮ ಜ್ಞಾನಿಗಳ ಸಂಪಾದಿಸಬೇಕು ||ಪ||
ಅತಿಜ್ಞಾನಿಯಾಗಬೇಕು , ಹರಿಕಥೆ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿಸುತರಿರಬೇಕು , ಅತಿಮೋಹ ಬಿಡಬೇಕು
ಮತಿಯೊಂದು ಬಿಡದೆ ಹರಿ ಪೂಜಿಪರ ಸಂಗ ||
ನಡೆಯಾತ್ರೆ ಎನಬೇಕು , ನುಡಿನೇಮವಿರಬೇಕು ,
ಬಿಡದೆ ಹರಿಪೂಜೆಯ ಮಾಡಬೇಕು
ಅಡಿಗಡಿಗೆ ನೆನೆಬೇಕು , ಹರಿಗಡ್ಡ ಬೀಳಬೇಕು
ಬಿಡದೆ ಹರಿಭಜನೆ ಮಾಡುವರ ಸಂಗ ||
ಸುರಹರವಿರಿಂಚಿಗಳ ಪರಿಯ ತಿಳಿಯಲುಬೇಕು
ತಾರತಮ್ಯ ಪಂಚಭೇದ ತತ್ವನಿರತ
ಅರಿಯದಿದ್ದರೆ ಗುರುಹಿರಿಯರನೆ ಕೇಳಬೇಕು
ಪರಮಾನಂದದಿ ಲೋಲಾಡುವರ ಸಂಗ ||
ಷಟ್ಕರ್ಮ ಮಾಡಬೇಕು , ವೈಷ್ಣವನೆನಿಸಬೇಕು
ವಿಷ್ಣುದಾಸರ ದಾಸನಾಗಬೇಕು
ಉತ್ಕೃಷ್ಟ ವೈರಾಗ್ಯ ಬೇಕು , ದುಷ್ಟಸಂಗ ಬಿಡಬೇಕು
ಎಷ್ಟು ಕಷ್ಟ ಬಂದರು ವಿಷ್ಣುಭಜಿಪರ ಸಂಗ ||
ಏಕಾಂತ ಕೊಡಬೇಕು , ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರವೆಂದು ಕಕುಲಾತಿ ಬಿಡಬೇಕು
ಶ್ರೀಕಾಂತ ಪುರಂದರವಿಠಲದಾಸರ ಸಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments