ಇನ್ನೇನಿನ್ನೇನು?
ರಾಗ: ಸೌರಾಷ್ಟ್ರ
ತಾಳ: ಝಂಪೆ
ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ||
ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ||
ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು
ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧||
ಒತ್ತಿ ಹಿಡಿದ ಕಂಬ ವ್ಯರ್ಥವಾದ ಮೇಲಿನ್ನೇನಿನ್ನೇನು
ಜತ್ತಾದ ಜನರೆಲ್ಲ ಜರೆದು ಪೋದ ಮೇಲಿನ್ನೇನಿನ್ನೇನು ||೨||
ತೋಡಲು ಬಾವಿ ಬೇತಾಳ ಹೊರಟಿತು ಇನ್ನೇನಿನ್ನೇನು
ನಾಡ ಜನಕೆ ನಾಲ್ಕು ನಾಲಿಗುಂಟಾಯಿತು ಇನ್ನೇನಿನ್ನೇನು ||೩||
ಬರಹೋಗುವವರ ಮುಂದೆ ಮರಿಯಾದೆ ಹೋಯಿತು ಇನ್ನೇನಿನ್ನೇನು
ಸರಸ ಸಂಸಾರದ ಸವಿ ಹಾರಿಹೋಯಿತು ಇನ್ನೇನಿನ್ನೇನು ||೪||
ಕಯ್ಯಿಗೆ ಬಂದಪರಂಜಿ ಕಬ್ಬಿಣವಾಯಿತು ಇನ್ನೇನಿನ್ನೇನು
ಬಯಸಲೇತಕೆ ಪಡೆದ ಭಾಗ್ಯ ಬಯಲಾಯಿತು ಇನ್ನೇನಿನ್ನೇನು ||೫||
ಅರ್ಥಿಯ ಸಂಸಾರ ಅಡವಿಯ ಪಾಲಾದ ಮೇಲಿನ್ನೇನಿನ್ನೇನು
ಮಿತ್ರರಾದವರೆಲ್ಲ ಶತ್ರುಗಳಾದ ಮೇಲಿನ್ನೇನಿನ್ನೇನು ||೬||
ಗಂಡ(ಗಂಡು)ಮಕ್ಕಳು ಯಮಗಂಡರಾದ ಮೇಲಿನ್ನೇನಿನ್ನೇನು
ಪಂಡಿತ ಶ್ರೀ ಪುರಂದರವಿಠಲರಾಯ ಇನ್ನೇನಿನ್ನೇನು ||೭||
( ದಾಸಸಾಹಿತ್ಯ ಮಾಲಿಕೆ :೨ - ಪುರಂದರದಾಸರ ಹಾಡುಗಳು)
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments