ಇನ್ನಾದರೂ ಹರಿಯ ನೆನೆ ಕಂಡ್ಯ
(ರಾಗ ಮುಖಾರಿ ಝಂಪೆ ತಾಳ)
ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ
ಮುನ್ನಾದ ದುಃಖವು ನಿಜವಾಗಿ ತೊಲಗುವುದು ||
ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ
ತೀರದಲಿ ಕುಳಿತು ನೀ ಹಣೆಗೆ ನಿತ್ಯ
ನೀರಿನಲಿ ಮಟ್ಟಿಯನು ಕಲೆಸಿ ಬರೆಯುತ ಮೂಗ
ಬೇರನ್ನು ಪಿಡಿದು ಮುಳುಗಿಕ್ಕಲೇನುಂಟು ||
ನೂರಾರು ಕರ್ಮಂಗಳನ್ನು ಡಂಬಕೆ ಮಾಡಿ
ಆರಾರಿಗೋ ಹಲವು ದಾನ ಕೊಟ್ಟು
ದಾರಿದ್ರ್ಯವನು ಪಡೆದು ತಿರಿದುಂಬುವುದಕೀಗ
ದಾರಿಯಾಯ್ತೇ ಹೊರತು ಬೇರೆ ಫಲವುಂಟೇ ||
ನಾಡಾಡಿ ದೈವಗಳ ಚಿನ್ನ ಬೆಳ್ಳಿಗಳಿಂದ
ಮಾಡಿಕೊಂಡದರ ಪೂಜೆಯನು ಮಾಡಿ
ಕಾಡಕಳ್ಳರು ಬಂದು ಅವನು ಕೊಂಡೊಯ್ಯೆ
ಮಾಡಿಕೊಂಡಿರ್ದುದಕೆ ಬಾಯ ಬಡಕೊಳ್ಳುವೆಯೊ ||
ಮಗನ ಮದುವೆಯು ಎಂದು ಸಾಲವನು ಮಾಡಿ ನೀ
ಸುಗುಣಿಯೆನ್ನಿಸ್ಕೊಳ್ಳಲು ವ್ಯಯಮಾಡಿದೆ
ಹಗರಣವಪಡಿಸಿದರೆ ಸಾಲಗಾರು ಬಂದು
ಬಗೆಬಗೆಯೊಳವರ ಕಾಲ್ಗೆ ಬಿದ್ದಿರುವೆ ||
ಕೆಟ್ಟ ಈ ಬದುಕುಗಳ ಮಾಡಿದರೆ ಫಲವೇನು
ಥಟ್ಟನೇ ಶ್ರೀ ಹರಿಯ ಪದವ ನಂಬು
ದಿಟ್ಟ ಶ್ರೀಪುರಂದರವಿಠಲ ಗತಿಯೆಂದರೆ
ಸುಟ್ಟು ಹೋಗುವುದಯ್ಯ ಕಷ್ಟರಾಶಿಗಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments