ಇಕ್ಕಲಾರೆ ಕೈ ಎಂಜಲು
(ರಾಗ ಪೂರ್ವಿ ಅಟತಾಳ)
ಇಕ್ಕಲಾರೆ ಕೈ ಎಂಜಲು , ಚಿಕ್ಕ
ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||
ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆ
ಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸಯ್ಯ
ತನಯರು ಅಳುತಾರೆ , ನಿನದೇನು ಕಾಟವು
ಕ್ಷಣ ಹೊತ್ತು ನಿಲ್ಲದೆ, ಹೋಗೋ ದಾಸಯ್ಯ ||
ಅಟ್ಟದ ಮೇಲಣ ಅಕ್ಕಿ ತೆಗೆಯಬೇಕು
ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ
ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ
ನಿಷ್ಠುರ ಮಾಡದೆ ಹೋಗೋ ದಾಸಯ್ಯ ||
ವೀಸದ ಕಾಸಿಗೆ ದವಸವ ನಾ ತಂದೆ
ಕೂಸಿಗೆ ಸಾಲದು , ಹೋಗೋ ದಾಸಯ್ಯ
ಆಸೆಕಾರ ನೀನು , ದೋಷಕಾರಿ ನೀನು
ಶೇಷಾಚಲವಾಸ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments