ಇಂದು ನಾನೇನು ಸುಕೃತವ ಮಾಡಿದೆನೊ

ಇಂದು ನಾನೇನು ಸುಕೃತವ ಮಾಡಿದೆನೊ

(ರಾಗ ಮಧ್ಯಮಾವತಿ ಏಕತಾಳ) ಇಂದು ನಾನೇನು ಸುಕೃತವ ಮಾಡಿದೆನೊ ಮಂಗಳಮಹಿಮ ವೆಂಕಟ ಬಂದ ಮನೆಗೆ ||ಪ|| ಹಾರ ಕೇಯೂರ ಹೊನ್ನುಂಗುರ ಬೆರಳ ಹಾರದ ನಡುವೆ ಹಾಕಿದ ಏಳು ಪದಕ ತೋರಮುತ್ತಿನ ಕಂಠಮಾಲೆ ಮಾಲಿಕೆಯ ಮೇಲುಗಿರಿಯ ವೆಂಕಟ ಬಂದ ಮನೆಗೆ || ಎಸಳು ಸುತ್ತಿದ ಪಟ್ಟೆ ಎಸೆವ ಕಸ್ತೂರಿಯು ಹಸನ ಸಣ್ಣ ನಾಮ ಸಾದೂತಿಲಕವು ಕುಸುಮ ಮಲ್ಲಿಗೆ ಜಾಜಿ ಎಸೆವ ಸಂಪಿಗೆಯು ವಸುಧೇಶ ಸೊಬಗ ವೆಂಕಟ ಬಂದ ಮನೆಗೆ || ಬಿಗಿದು ಸುತ್ತಿದ ಓಲೆ ಬಿಡು ಮುತ್ತಿನೊಂಟಿ ಬಗೆಬಗೆಯುಂಗುರ ಧಗಧಗಿಸುತಲಿ ಅಗಣಿತ ಹಸ್ತ ಕಂಕಣ ಹೊಳೆವುತಲಿ ಜಗದೊಳಧಿಕನು ವೆಂಕಟ ಬಂದ ಮನೆಗೆ || ಪಿಡಿದ ಸುದರ್ಶನ ಎಡಗೈಯ ಶಂಖ ಪಿಡಿದಿದ್ದ ಖಡ್ಗದಿ ಜಡರ ಮರ್ದಿಸುತ ಉಡಿದಾರ ನಡುವೆ ಹೃದಯದೊಳು ಲಕ್ಷ್ಮೀ ಬದವರ ಧ್ಯೇಯ ವೆಂಕಟ ಬಂದ ಮನೆಗೆ || ಬಾಲಚಂದ್ರನ ಪೋಲ್ವ ಓಲೆಕುಂಡಲವು ಮೇಲು ಮಾಣಿಕ್ಯ ನವರತ್ನದುಂಗುರವು ಕಾಲಲಂದುಗೆಯು ನವರತ್ನದ್ಹಾವುಗೆಯು ಮೇಲುಗಿರಿವಾಸ ವೆಂಕಟ ಬಂದ ಮನೆಗೆ || ಇಂದಿರೆರಮಣ ನೀ ಎನ್ನ ಕುಲ ತಿಲಕ ನಂದನ ಕಂದ ಮುಕುಂದ ಗೋವಿಂದ ಬಂದೆನ್ನ ಪಾಪದ ಬಂಧನ ಪರಿಹರಿಸೊ ಕಂದರ್ಪಜನಕ ವೆಂಕಟ ಬಂದ ಮನೆಗೆ || ಪಾಷಾಣರೂಪದ ಅಹಲ್ಯಾ ಶಾಪವನು ಶೋಷಣೆ ಮಾಡಿದ ಸೊಬಗು ರೂಪಿನಲಿ ಶೇಷಾಚಲಧೀಶ ಮಹಶೇಷಶಯನ ದಾಸಪಾಲಕನು ವೆಂಕಟ ಬಂದ ಮನೆಗೆ || ಹೊಳೆವ ಪೀತಾಂಬರ ಉಡುಗೆ ಕಠಾರಿ ಹೊಳೆವ ಕಂಗಳ ನೋಟ ಹೊಸ ಪಂಚಬಾಣ ವೀಳ್ಯದ ಬಾಯ ಕರ್ಪೂರ ಕರಡಿಗೆಯು ಚೆಲುವ ಶರೀರ ವೆಂಕಟ ಬಂದ ಮನೆಗೆ || ಗರುಡನನೇರಿ ಮೂಜಗವ ಮೋಹಿಸುತ ಪರಮವೈಷ್ಣವರ ಪಾವನವ ಪಾಲಿಸುತ ಪರಿಪರಿಯ ತನ್ನ ಬಿರುದ ಪೊಗಳಿಸುತ ಪುರಂದರವಿಠಲ ವೆಂಕಟ ಬಂದ ಮನೆಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು