ಇಂದಿನಿರುಳಿನ ಕನಸಿನಲ್ಲಿ ಬಂದು

ಇಂದಿನಿರುಳಿನ ಕನಸಿನಲ್ಲಿ ಬಂದು

(ರಾಗ ಶುದ್ಧಸಾವೇರಿ ಅಟ್ಟತಾಳ) ಇಂದಿನಿರುಳಿನ ಕನಸಿನಲ್ಲಿ ಬಂದು ಮುಂದೆ ನಿಂದುದ ಕಂಡೆನೆ ಗೋವಳನ ||ಪ|| ಆಣಿಮುತ್ತಿನ ವೆಂಡೆಯದ ಕಾಲಂದುಗೆ ಗೆಜ್ಜೆ ಜಾಣನಂಗಜನ ಪಿತನ ಕೈಯ ವೇಣು ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ ವಾಣಿಯ ರಚನೆ ಎಲ್ಲಿ[ಯು] ಈ ಗೋವಳನಾ ||೧|| ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ- ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ ಗೋಪಿಯರ ಮೇಲೆ ಕಡೆಗಣ್ಣ ಚೆಲ್ಲುತೊಯ್ಯನೆ ನಡೆದ ಗೋವಳನ ||೨|| ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ ತುತ್ತುರೂ ತೂರು ತೂರೆನುತ ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ ಮೊತ್ತದ ಗೋಪಿಯರನೆಲ್ಲ ಗೋವಳನ ||೩|| ಎಸಳುಕಂಗಳ ಢಾಳ ಶಶಿ ನೊಸಲ ತಿಲಕ ಎಸೆವ ಬಿಂಬಾಧರದ ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ ಎಸೆವ ನೂಪುರ ಹಾಹೆಯ(?) ಗೋವಳನ ||೪|| ಉಂಗುಟದಲಿ ಗಂಗೆಯಂಗಾಲಲವುಂಕೆ ತುಂಗವಕ್ಷದ ಲಕ್ಷುಮೀ ಮಂಗಳ ಮಹಿಮ ಭುಜಂಗಶಯನ ಸಿರಿ ರಂಗವಿಠಲ ನೆರೆದ ಗೋವಳನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು