ಆವ ಕುಲವಾದರೇನು

ಆವ ಕುಲವಾದರೇನು

ರಾಗ ರೇಗುಪ್ತಿ/ಅಟ್ಟ ತಾಳ ಆವ ಕುಲವಾದರೇನು ಆವನಾದರೇನು ಆತ್ಮ ಭಾವವರಿತ ಮೇಲೆ || ಪಲ್ಲವಿ || ಹಸಿ ಕಬ್ಬು ಡೊಂಕಿರಲು ಅದರ ರಸ ತಾನು ಡೊಂಕೇನೊ ವಿಷಯಾಸೆಗಳ ಬಿಟ್ಟು ಹಸನಾದ ಗುರುಭಕ್ತಿ ಮಾಡೋ || ೧ || ರಾಗ ರೇಗುಪ್ತಿ/ಅಟ್ಟ ತಾಳ ನಾನಾ ವರ್ಣದ ಆಕಳು ಅದು ನಾನಾ ವರ್ಣದ ಕ್ಷೀರವೇನೋ ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ ಜ್ಞಾನ ಒಲಿಸಿರೋ || ೨ || ಕುಲದ ಮೇಲೆ ಹೋಗಬೇಡ ಮನುಜಾ ಕುಲವಿಲ್ಲ ಜ್ಞಾನಿಗಳಿಗೆ ವರದ ಪುರಂದರವಿಠಲನ ಪಾದವ ಸೇರಿ ಮುಕ್ತನಾಗೋ || ೩ || ~~~~ * ~~~~ [ಕುಲ, ಮತ, ಜಾತಿಗಳು ಮುಖ್ಯವಲ್ಲ; ಭಕ್ತಿಯ ಭಾವ, ಜ್ಞಾನ ಇವೇ ಮುಖ್ಯ. ಯಾವ ಕುಲದವರೇ ಆಗಲಿ ಭಕ್ತಿ, ಜ್ಞಾನಗಳಿದ್ದರೆ ಅವರು ಮಾನ್ಯರೇ. ಅವಕ್ಕೆ ಕುಲ ಕಾರಣವಾಗುವುದಿಲ್ಲ. ವಿಷಯದ ಆಸೆ ಬಿಡುವುದು, ಗುರುಭಕ್ತಿ ಮಾಡುವುದು, ಕೆಟ್ಟ ಕೆಲಸಗಳನ್ನು ಮಾಡದಿರುವುದು, ಜ್ಞಾನವನ್ನು ಪಡೆದುಕೊಳ್ಳುವುದು ಇವು ಆಧ್ಯಾತ್ಮದಲ್ಲಿ ಆಸಕ್ತರಾದವರಿಗೆ ಮುಖ್ಯ.] [ಪುರಂದರ ಸಾಹಿತ್ಯ ದರ್ಶನ - ಸಂಪುಟ ೩]
ದಾಸ ಸಾಹಿತ್ಯ ಪ್ರಕಾರ
ಬರೆದವರು