ಆರ ಮಗನೆಂದರಿಯೆವೆ ಇವ
( ರಾಗ ಭೈರವಿ. ಝಂಪೆ ತಾಳ)
ಆರ ಮಗನೆಂದರಿಯೆವೆ ಇವ, ನಮ್ಮ
ಕೇರಿಯೊಳು ಸುಳಿದು ಪೋದನಮ್ಮ ||ಪ||
ಪಾರಿಜಾತವ ತುರುಬಿದ, ಕಸ್ತೂರಿ
ಗೀರು ಗಂಧವ ತಿದ್ದಿಹನಮ್ಮ
ದೂರದಲಿ ನಿಂತುಕೊಂಡು, ಸೋಗೆಕಣ್ಣು
ಓರೆನೋಟದಿ ನೋಡುವನಮ್ಮ ||
ಶಂಖ ಚಕ್ರವ ಪಿಡಿದಿಹ ತಾನು, ಬಲು
ಬಿಂಕದಲಿ ಕೊಳಲೂದುವನಮ್ಮ
ಶಂಕೆಯಿಲ್ಲದೆ ಬದಿಯಲಿ ಬಂದುನಿಂತು
ಪೊಂಕದಲಿ ನಲಿದಾಡುವನಮ್ಮ ||
ನೀಲಮೇಘದ ಮೈಯವ, ತುಲಸೀವನ-
ಮಾಲೆ ಕೊರಳಲಿ ಧರಿಸಿಹನಮ್ಮ
ಬಾಲ ಪ್ರಾಯದ ಚೆನ್ನಿಗ, ಬಂದು ಎಮ್ಮ
ಓಲೈಸಿ ಅಪ್ಪಿ ಪೋದನಮ್ಮ ||
ಸೀತೆಯನು ತರಲು ಪೋಗಿ, ಸಾಗರಕೆ
ಸೇತುವೆಯ ಕಟ್ಟಿಸಿದನೇ ಅಮ್ಮ
ದೈತ್ಯ ರಾವಣನ ಕೊಂದು, ಲಂಕೆಯನು
ಇತ್ತನೆ ವಿಭೀಷಣನಿಗೆ ಅಮ್ಮ ||
ಗೋಕುಲದೊಳಗೆ ಪುಟ್ಟಿ , ಕೃಷ್ಣ ತ
ಗೋಪಿಗೆ ಶಿಶುವಾದನೇ ಅಮ್ಮ
ಆಕಳ್ಹಿಂಡುಗಳ ಕಾಯ್ದು , ರಂಗ ತಾ
ಏಕ ಮಧುರೆಗೆ ಪೋದನೇ ಅಮ್ಮ ||
ಪೀತಾಂಬರನುಟ್ಟಿಹ, ಪೊಳೆವ ಕಟಿ-
ಸೂತ್ರವನು ಧರಿಸಿದವನೆ ಅಮ್ಮ
ಮಾತುಳನ ಕೊಂದು ಪಟ್ಟ- ಗಟ್ಟಿದನೆ
ತಾತ ಉಗ್ರಸೇನಗೆ ಅಮ್ಮ ||
ಮುತ್ತಿನ ಮೂಗುತಿಟ್ಟು, ಉಡುಪಿಯಲಿ
ನಿತ್ಯ ಪೂಜೆಯ ಕೊಂಬುವನಮ್ಮ
ಸತ್ಯನೆಂದೆನಿಸಿಕೊಂಡು ಸುಳಿದನೆ
ಕರ್ತು ಪುರಂದರವಿಠಲನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments