ಆರೇನು ಮಾಡುವರು ಆರಿಂದಲೇನಹುದು

ಆರೇನು ಮಾಡುವರು ಆರಿಂದಲೇನಹುದು

( ರಾಗ ಮುಖಾರಿ. ಝಂಪೆ ತಾಳ) ಆರೇನು ಮಾಡುವರು ಆರಿಂದಲೇನಹುದು ಪೂರ್ವ ಜನ್ಮದ ಕರ್ಮ ವಿಧಿ ಬೆನ್ನ ಬಿಡಿದು ||ಪ|| ಐದು ವರ್ಷದ ಹಸುಳೆ ವನವೆತ್ತ ತಪವೆತ್ತ ಬೈದು ಮಲತಾಯಿಯಡವಿಗೆ ನೂಕಲು ಸುಯ್ದು ಕೋಪಾಗ್ನಿಯಲಿ ಪುರ ಹೊರಟು ಪೋಪಾಗ ಐದೆ ಪಿತರುಗಳಿದ್ದು ಏನು ಮಾಡಿದರು || ಪಾಪಿ ದುಶ್ಯಾಸನ ದ್ರೌಪದಿಯ ಸೀರೆಯ ಸೆಳೆದು ಕೋಪದಿಂ ಮಾನಭಂಗವ ಮಾಡಲು ಶ್ರೀಪತಿಯೆ ಕಾಯೆಂದು ಮೊರೆಯಿಡುವ ಸಮಯದಲಿ ಭೂಪರೈವರು ಇದ್ದು ಏನು ಮಾಡಿದರು || ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು ಸೆಣಸಿ ಷಡುರಥರೊಡನೆ ಹೊಯ್ದಾಡಲು ಅಣಕವಿಲ್ಲದೆ ಕಾದುತಸುವಳಿದು ಪೋಪಾಗ ತ್ರಿಣಯಸಖಪಾರ್ಥರಿದ್ದೇನು ಮಾಡಿದರು || ನೃಪರೊಳಗೆ ಅತಿ ಶ್ರೇಷ್ಠ ಬಲವಂತ ಸಿರಿರಾಮ ಅಪರಿಮಿತ ಶೌರಿ ಲಕ್ಷ್ಮಣ ದೇವರು ಚಪಲಾಕ್ಷಿ ಸೀತೆಯೆನು ಖಳನು ಕದ್ದೊಯ್ವಾಗ ನಿಪುಣರಿವರಿದ್ದು ಇನ್ನೇನು ಮಾಡಿದರು || ಬ್ರಹ್ಮಶಿರ ಶಿವನ ಕರವನು ಕಚ್ಚಿ ಕಾಡುತಿರೆ ಸುಮ್ಮನೆ ಜಗವೆಲ್ಲ ತಿರುಗುತಿರಲು ಬೊಮ್ಮ ಮೂರುತಿ ನಮ್ಮ ಪುರಂದರ ವಿಠಲನೆ ನಿಮ್ಮ ಆಜ್ಞೆಯ ಮೀರಿ ಬದುಕಿ ಬಾಳುವರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು