ಆರೇನು ಮಾಡುವರು ಅವನಿಯೊಳಗೆ
(ರಾಗ ಕಾಂಭೋಜ ಝಂಪೆತಾಳ )
ಆರೇನು ಮಾಡುವರು ಅವನಿಯೊಳಗೆ ||ಪ||
ಪೂರ್ವ ಜನ್ಮದ ಕರ್ಮ ಹಣೆಯಲಿ ಬರೆದುದಕೆ ||ಅ||
ಮಾಡಿದಾಡುಗೆಯು ಕೆಡಲು , ಮನೆಯ ಗಂಡಸು ಬಿಡಲು
ಕೂಡಿದ್ದ ಸತಿ ತಾನು ಕುಣಿಸ್ಯಾಡಲು
ಗೋಡೆಗೆ ಬರೆದ ಹುಲಿ ಘುಡುಘುಡಿಸಿ ತಿನಬರಲು
ಆಡದ ಮಾತುಗಳು ಅಖಿಳರೂ ನಿಜವೆನಲು ||
ಹೊಲ ಬೇಲಿ ಮೆದ್ದರೆ , ಮೊಲವೆದ್ದು ಇರಿದರೆ
ತಲೆಗೆ ತನ್ನ ಕೈಪೆಟ್ಟು ತಾಗಿದರೆ
ಹೆಳಲು ಹಾವಾದರೆ , ಗೆಳೆಯ ರಿಪುವಾದರೆ
ಕಲೆಸಿಟ್ಟ ಅವಲಕ್ಕಿ ಕಲಪರಟಿ ನುಂಗಿದರೆ ||
ಹೆತ್ತ ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ
ಮತ್ತೆ ತಂದೆಯು ಹೊರಗೆ ಮಾರಿದರೆ
ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ
ಕತ್ತಲೆಯು ಬೆನ್ನಟ್ಟಿ ಕರಡ್ಯಾಗಿ ಕಚ್ಚಿದರೆ ||
ಕಣ್ಣಿನೊಳಗಿನ ಬೊಂಬೆ ಕಚ್ಚಾಡಬಂದರೆ
ಹೆಣ್ಣಿನ ಹೋರಾಟ ಹೆಚ್ಚಾದರೆ
ಅನ್ನ ಉಣದೆ ಬಹಳ ಅಜೀರ್ಣವಾದರೆ
ಪುಣ್ಯತೀರ್ಥಗಳಲ್ಲಿ ಪಾಪ ಘಟಿಸಿದರೆ ||
ಏರಿ ಕುಳಿತ ಬೊಂಬೆ ಎರಡಾಗಿ ಮುರಿದರೆ
ಮೇರೆ ತಪ್ಪಿ ವಿಧಿಯು ಮೀರಿದರೆ
ಆರಿದ್ದ ಇದ್ದಲಿಯು ಅಗ್ನಿಯಾಗುರಿದರೆ
ಧೀರ ಪುರಂದರವಿಠಲ ನಿನ್ನ ದಯ ತಪ್ಪಿದರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments