ಆರು ಒಲಿದರೇನು ನಮಗಿನ್ನಾರು ಮುನಿದರೇನು

ಆರು ಒಲಿದರೇನು ನಮಗಿನ್ನಾರು ಮುನಿದರೇನು

(ರಾಗ ಶಂಕರಾಭರಣ ಆದಿತಾಳ) ಆರು ಒಲಿದರೇನು ನಮಗಿನ್ನಾರು ಮುನಿದರೇನು ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ|| ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು ಮಡದಿ ಮಕ್ಕಳು ಮನೆಗಳು ನೆಂಟರು ಮುನಿಸುಗುಟ್ಟಿದರೇನು ಒಡನೆ ತಿರುಗುವ ಆ ಗೆಳೆಯನು ಮನದೊಳು ವೈರವ ಬೆಳೆಸಿದರೇನು ಕಡಲಶಯನನ ಕರುಣಾರೂಪನ ಒಲುಮೆಯುಳ್ಳ ಹರಿದಾಸರಿಗೆ ||೧|| ಊರನು ಆಳುವ ದೊರೆಯು ನಮ್ಮನು ಹೊರಗೆ ಹಾಕಿದರೇನು ಘೋರಾರಣ್ಯದೊಳು ಆಡುವ ಮೃಗಗಳು ಅಡ್ಡಗಟ್ಟೀದರೇನು ಮಾರಿ ಹಿಂಡು ಮುಸುಕಿದ ದಂಡು ಮೈಗೆ ಮುತ್ತಿದರೇನು ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ||೨|| ಕಾನನದೊಳು ಹರಿದಾಡುವ ಉರಗವು ಕಾಲಿಗೆ ಸುತ್ತಿದರೇನು ಜೇನಿನ ಅಂದದಿ ಕ್ರಿಮಿಕೀಟಂಗಳು ಚರ್ಮಕೆ ಮುತ್ತಿದರೇನು ಭಾನುಮಂಡಲ ಭಜಿಸುವ ಭಕ್ತರ ಬಲಗಳು ತಪ್ಪಿದರೇನು ಮನದಲಿ ಸಿರಿವರ ವಿಠ್ಠಲನ ಒಲುಮೆಯುಳ್ಳ ಹರಿದಾಸರಿಗೆ ||೩|
ದಾಸ ಸಾಹಿತ್ಯ ಪ್ರಕಾರ
ಬರೆದವರು