ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ
(ಭೈರವಿರಾಗ ದಾದರಾ ತಾಳ)
ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ
ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ||
ಮೂಲದಲಿ ಮನಮೈಲ ತೊಳಿಯದೆ ಜಲಮುಣುಗುವದಿದ್ಯಾತಕೆ
ಬಲುವಭಾವದ ಕೀಲ ತಿಳಿಯದೆ ಮಾಲೆಜಪ ಕೈಯಲ್ಯಾತಕೆ
ನೆಲೆಯುಗೊಳ್ಳದೆ ಮೂಲಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ
ಹಲವು ಜನ್ಮದ ಹೊಲಿಯು ತೊಳಿಯದೆ ಶೀಲ ಸ್ವಯಂಪಾಕ್ಯಾತಕೆ ||೧||
ಹರಿಯ ಚರಣಾಂಬುಜವನರಿಯದೆ ಬರಿಯ ಮಾತಿನ್ಯಾತಕೆ
ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ
ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ
ತರಣೋಪಾಯದ ಸ್ಮರಣೆ ಇಲ್ಲದೆ ತರ್ಕಭೇದಗಳ್ಯಾತಕೆ ||೨||
ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ಕಂತುಪಿತನಾರ್ಚನೆಯನರಿಯದ ತಂತ್ರಮಂತ್ರಗಳ್ಯಾತಕೆ
ಸಂತತ ಚಿಂತಾಯಕನಾ ನೆನೆಯದೆ ಮಂತ್ರಮಾಲೆಗಳ್ಯಾತಕೆ
ಪಂಥವರಿಯದೆ ಪರಮಯೋಗದಾನಂತವ್ರತವಿದುವ್ಯಾತಕೆ ||೩||
ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆ ಏತಕೆ
ಗುಹ್ಯ ಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ
ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡನಿದ್ಯಾತಕೆ
ಮಹಾವಾಕ್ಯದಿತ್ಯರ್ಥವರಿಯದೆ ಸಾಯಸ ಬರುವದ್ಯಾತಕೆ ||೪||
ಭಾಗ್ಯ ಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ
ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥ ಸಾಧನ
ಭೋಗ್ಯಭೋಗದ ಸಾರ ಸುಖವಿದು ಯೋಗಿ ಮಾನಸ ಜೀವನ
ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೊ ಸನಾತನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments