ಆತನ ಪಾಡುವೆ ಅನವರತ
( ರಾಗ ಪೂರ್ವಿ ಅಟ ತಾಳ)
ಆತನ ಪಾಡುವೆ ಅನವರತ ಪ್ರೀತಿಯಿಂದಲಿ
ತನ್ನ ಭಕುತರ ಸಲಹುವ ||ಪ||
ಆವಾತನ ಕೀರ್ತಿ ಪರೀಕ್ಷಿತ ಕೇಳಿ
ಪಾವನನಾದನು ಮೂಜಗವರಿಯೆ
ಭಾವಶುದ್ಧಿಯಲಿ ಶುಕನಾರ ಪೊಗಳುವ
ಆವಾಗ ಪ್ರಹ್ಲಾದನಾರ ನೆನೆವನಯ್ಯ
ಶಿಲೆಯ ಬಾಲೆಯ ಮಾಡಿದ ಪಾದವಾರದು
ನಳಿನಸಂಭವನ ಪೆತ್ತವರಾರು
ಕಲಿಯುಗದಿ ಜನರಿಗೆ ಯಾರ ನಾಮವೆ ಗತಿ
ಇಳೆಯ ಭಾರವನಿಳುಹಿ ಸಲಹಿದರಾರಯ್ಯ
ದ್ರುಪದನ ಸುತೆಯಭಿಮಾನ ರಕ್ಷಕರಾರು
ನೃಪ ಧರ್ಮಜಗೆ ರಕ್ಷಕನಾರು
ಕೃಪೆಯಿಂದ ವಿದುರನ ಮನೆಯಲುಂಡವನಾರು
ಆಪತ್ಕಾಲದಿ ಗಜನ ಸಲಹಿದನಾರಯ್ಯ
ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ
ರಥವನೇರಿ ನಡೆಯಿಸಿದವರಾರು
ಪೃಥ್ವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು
ಮತಿವಂತ ಧ್ರುವನ ರಕ್ಷಕರಾರು ಪೇಳಯ್ಯ
ಸಾಗರನ ಮಗಳಿಗು ಯಾರ ನಾಮವೆ ಗತಿ
ಯೋಗದಿ ನಾರದನಾರ ಭಜಿಪನು
ರಾಗ ರಹಿತ ಹನುಮಂತನೊಡೆಯನಾರು
ಭಾಗವತರ ಪ್ರಿಯ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments