ಆಡಿದ ರಂಗನಾಡಿದ
( ರಾಗ ಭೂರಿಕಲ್ಯಾಣಿ ಚಾಪು ತಾಳ)
ಆಡಿದ ರಂಗನಾಡಿದ ||ಪ ||
ರೂಢಿಯೊಳಗೆ ನಮ್ಮ ಮಕ್ಕಳಂತೆ ||ಅ.ಪ||
ಮಣ್ಣಾಟ ಬೇಡವೊ ಬುಕ್ಕಚ್ಚಿ ಮಾಡಬೇಕು
ಅಣ್ಣಯ್ಯ ಬಾರೆಂದು ಎತ್ತಿಕೊಂಡು
ಎಣ್ಣೆ ಒತ್ತಿ ಬೇಗ ಎರೆದಳು ಗೋಪ್ಯಮ್ಮ
ಕಣ್ಣಿಗೆ ಕಾಡಿಗೆ ಇಟ್ಟಳು ಕೇಳಯ್ಯ ||
ತಿಲಕವು ಫಣೆಯಲಿ ಸರಿಗೆ ಕೊರಳು
ಥಳಥಳಿಸುವ ಕರ್ಣಭೂಷಣ ಉಡಿದಾರ
ಹೊಳೆವ ಪೀತಾಂಬರ ಹೆಗಲಿಂದ ಒಲಿವುದು
ಜಲಜನಾಭನಿಗೆ ಕಡಗ ಕಾಲಸರಗಳು ||
ಮೂರು ವರುಷಗಳು ಮುದ್ದು ರಂಗಯ್ಯಗೆ
ಮೀರಿದ ಕೆಂದುಟಿ ಜೊಲ್ಲು ಬಾಯಿ
ವಾರಿಗೆಯ ಮಕ್ಕಳ ಕೂಡ ಬೀದಿಯಲಿ
ವಾರಿಜನಾಭನು ನಲಿಯುತಲಿರುತಿರ್ದ ||
ಚೆಂಡು ಬುಗುರಿ ಮತ್ತು ಕಣ್ಣುಮುಚ್ಚಿ ಕೋಲು
ಗಂಡು ಮಕ್ಕಳ ಸಹ ಗಜುಗದಾಟ
ಕಂಡವರ ಮನವನು ಅಪಹರಿಸುತಲಿ
ದಂಡಪ್ರಣವಗೊಂಬ ವಿರಿಂಚಾದಿಗಳಿಂದ ||
ಮಣ್ಣನೆತ್ತಿ ತನ್ನ ತಲೆಗೆ ತಿಕ್ಕಿದನು
ಮಣ್ಣಾಯಿತು ಮೈಯು ಪೀತಾಂಬರವು
ಮಣ್ಣ ಗಂಟು ಕಟ್ಟಿ ಉಪ್ಪು ಕೂಗಿದನು
ಮಣ್ಣ ಪಡೆದ ತಂದೆ ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments