ಆಂಜನೇಯನೆ ಅಮರವಂದಿತ
ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ |ಪ|
ಸಂಜೀವಿನಿಯನು ತಂದು ಕಪಿಗಳ ನಂಜುಕಳೆದ ಪ್ರಖ್ಯಾತನೆ |ಅ.ಪ|
ಕಾಮನಿಗ್ರಹನೆನಿಸಿ ಸುರರಭಿಮಾನ್ಯ ದೇವತೆ ಎನಿಸಿದೆ
ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ|
ಸಿಂಧುಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ತಂದು ಮುದ್ರಿಕೆಯಿತ್ತು ಮಾತೆಗೆ ಅಂದು ಸಂತೋಷಪಡಿಸಿದೆ|
ಜನಕತನಯಳ ಮನವ ಹರುಷಿಸಿ ವನವ ಕಿತ್ತೀಡಾಡಿದೆ
ದನುಜರನ್ನು ಸದೆದು ಲಂಕೆಯನನಲಗಾಹುತಿ ನೀಡಿದೆ|
ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ
ಶ್ರೀ ರಾಮ ಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ|
ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆ
ಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ|
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments