ಅಂತರಂಗದಲಿ ಹರಿಯ ಕಾಣದವ

ಅಂತರಂಗದಲಿ ಹರಿಯ ಕಾಣದವ

(ರಾಗ ರೇಗುಪ್ತಿ ಛಾಪುತಾಳ) ಅಂತರಂಗದಲಿ ಹರಿಯ ಕಾಣದವ ಹುಟ್ಟುಕುರುಡನೊ ||ಪ|| ಸಂತತ ಶ್ರೀಕೃಷ್ಣಚರಿತೆ ಕೇಳದವ ಜಡಮತಿ ಕಿವುಡನೊ , ಎಂದೆಂದಿಗು || ಅ|| ಹರುಷದಿಂದಲಿ ಹರಿಯ ಪೂಜೆ ಮಾಡದವ ಕರವು ಮುರಿದವನೊ ಸುರವರನ ಮುಂದೆ ಶ್ರೀಕೃಷ್ಣಾ ಎಂದು ಕುಣಿಯದವ ಕುಂಟನೊ ನರಹರಿ ಚರಣೋದಕ ಧರಿಸದ ಶಿರ ನಾಯುಂಬೋ ಹಂಚು ಕಾಣೊ ಸಿರಿವರಗರ್ಪಿಸದಲೆ ಮಾಡಿದ ಊಟ ಸೂಕರ ಭೋಜನವೊ, ಎಂದೆಂದಿಗು || ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಅಸತಿಯ ವ್ರತನೇಮವೊ ರಮೆಯರಸನ ಪ್ರೀತಿಪಡಿಸದ ವಿತರಣೆ ರಂಡೆ ಕೊರಳ ಸೂತ್ರವೊ ಕಮಲನಾಭನ ಪೊಗಳದ ಸಾರಸಂಗೀತ ಗಾರ್ದಭರೋದನವೊ ಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಖರವೊ, ಎಂದೆಂದಿಗು || ಜರೆ ಹುಟ್ಟು ಮರಣ ಕಡೆಯ ಸುದ್ದಿಯ ಬಿಟ್ಟು ನರರ ಸೇವಿಸಬೇಡವೊ ಸುರಧೇನು ಇರಲಾಗಿ ಕಾಣದೆ ಮೊಲೆಹಾಲು ಕರೆದು ಕುಡಿಯ ಬೇಡವೊ ಕರಿತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೊ ಪರಮಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ ,ಎಂದೆಂದಿಗು ||
ದಾಸ ಸಾಹಿತ್ಯ ಪ್ರಕಾರ
ಬರೆದವರು