ತಲ್ಲಣಸಿದಿರು ಕಂಡ್ಯ ತಾಳು ಮನವೆ
ರಚನೆ : ಕನಕದಾಸರು ರಾಗ : ಕೇದಾರಗೌಳ ತಾಳ: ಝಂಪೆ
ತಲ್ಲಣಸಿದಿರು ಕಂಡ್ಯ ತಾಳು ಮನವೆ || ಪಲ್ಲವಿ ||
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅನು ||
ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ || ೧ ||
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೋ
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ || ೨ ||
ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿ ಆಹಾರವನು ತಂದೀಯುವರ್ಯಾರೋ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ೩ ||
- Log in to post comments