ಆವ ರೋಗವೊ ಎನಗೆ...

ಆವ ರೋಗವೊ ಎನಗೆ...

"ಇಲ್ಲಿ ಅಮೇರಿಕದಲ್ಲಿ ದೇವಸ್ಥಾನ ಎಂದು ಮಾಡಿ ಒಂದು ವೇದಿಕೆಯಲ್ಲಿ ಎಲ್ಲಾ ದೇವರ ಫೋಟೊಗಳನ್ನು, ಮೂರ್ತಿಗಳನ್ನೂ ಇಡುತ್ತಾರೆ. ಪೂಜೆ ಮಾಡುತ್ತಾರೆ. ಆದರೆ ಹೀಗೆ ಇಟ್ಟಿರುವದನ್ನು ನೋಡಿದರೆ ಇದು ದೇವಸ್ಥಾನ ಅನಿಸುವದೇ ಇಲ್ಲ. ಮೂರ್ತಿಗಳು ಆಹಿತ ಪ್ರತಿಮೆಗಳು, ಅವುಗಳಲ್ಲಿ ಅರ್ಚನೆಗೆ ತಕ್ಕಂತೆ ಅಧಿಷ್ಠಾನವಂತೆ. ಹೀಗೆ ಇಟ್ಟಿರುವ ಮೂರ್ತಿಗಳಲ್ಲಿ ಅಧಿಷ್ಠಾನ ಎಷ್ಟರ ಮಟ್ಟಿಗೆ ಇದ್ದೀತೋ!!" ಪುರಂದರ ದಾಸರ ಆರಾಧನೆಯ ನಿಮಿತ್ತ ದಿನಪೂರ್ತಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಹೋಗಿ ಕುಳಿತ ಎಷ್ಟೋ ಹೊತ್ತಿನ ಮೇಲೆ ಒಮ್ಮಿಂದೊಮ್ಮೆಲೆ ಒಂದು ಬದಿಗೆ ಗುಂಪು ಗುಂಪಾಗಿ ಇಟ್ಟಿದ್ದ ದೇವರ ಮೂರ್ತಿಗಳನ್ನೂ, ದೇವರ ಚಿತ್ರ ಪಟಗಳನ್ನೂ ನೋಡಿ ಅದೊಂದು ಹೊಸದಾಗಿ ಶುರುವಾದ ದೇವಸ್ಥಾನ ಎಂದು ಹೊಳೆಯಿತು. ಅಮೇರಿಕದ ದೇವಸ್ಥಾನಗಳೊಂದು ರೀತಿ 'ಮ್ಯೂಸಿಯಂ ಅಫ್ ಗಾಡ್ಸ್' ಅನ್ನುವ ಎಲ್ಲೋ ಕೇಳಿದ ಮಾತು ನೆನಪಾಯಿತಲ್ಲದೇ ಮನಸ್ಸು ಏನೆಲ್ಲ ವಿಚಾರ ಮಾಡತೊಡಗಿತ್ತು! ಆಗಲೇ, ಆ ಕ್ಷಣದಲ್ಲಿ ಎದ್ದು ಹೋಗಿ, ಕಾಣಿಸಿದ ಮೂರ್ತಿಗಳಿಗೆ ನಮಸ್ಕಾರ ಮಾಡಿ ಬರುವದೋ ಅಥವಾ ಸ್ವಲ್ಪ ತಡೆದು ಹೋಗುವದೋ ಎನ್ನುವದು ಈ ವಿಚಾರ ತಲುಪುವ ನೆಲೆಗಾಗಿ ಕಾಯುತ್ತಿತ್ತು. ಪುರಂದರ ದಾಸರಿಗೆ ನಾನಂದುಕೊಳ್ಳುತ್ತಿದ್ದದ್ದು ಕೇಳಿಸಿತೋ, ಇಲ್ಲ ಅಧಿಷ್ಟಾನವೆಷ್ಟಿದ್ದೀತು ಎಂದುಕೊಂಡ ಮೂರ್ತಿಗಳೊಳಗಣ ದೇವರಿಗೇ ಕೇಳಿಸಿತೋ, ಅಥವ ನನ್ನಮ್ಮ ಹೇಳುವಂತೆ ತತ್ವಾಭಿಮಾನಿಗಳ ವ್ಯಾಪಾರವೋ ಅಥವ ಅವೆಲ್ಲವುಗಳ ಮೊತ್ತವೋ ತಿಳಿಯದು; ವೇದಿಕೆಯ ಮೇಲೆ ಹಾಡುತ್ತಿದ್ದವರು ಗೋಪಾಲದಾಸರ ಈ ಹಾಡನ್ನು ಹಾಡಲಾರಂಭಿಸಿದಾಗ ಅದು ನನಗೋಸ್ಕರವೇ ಹಾಡಿದ್ದು ಅನಿಸಿಬಿಟ್ಟಿತು. ಆವ ರೋಗವೊ ಎನಗೆ ದೇವ ಧನ್ವಂತ್ರಿ |ಪ| ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ |ಅ ಪ| ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ ಹರಿ ಪಾದ ಸೇವೆಗೆನ್ನ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿ ಯಾತ್ರೆಗಳಿಗೆನ್ನ ಕಾಲೇಳದಯ್ಯ ಅನಾಥಬಂಧು ಗೋಪಾಲವಿಠಲರೇಯ ಎನ್ನ ಭಾಗ್ಯದ ವೈದ್ಯ ನೀನೆ ಆದಿ ಅನಾದಿ ಕಾಲದ ಭವರೋಗ ಕಳೆಯಯ್ಯ ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ