ಪದ / ದೇವರನಾಮ

ದಾಸರ ಪದಗಳು

ಆವ ಭೂತ ಬಡಕೊಂಡಿತೆಲೊ ನಿನಗೆ

ಆವ ಭೂತ ಬಡಕೊಂಡಿತೆಲೊ ನಿನಗೆ
ದೇವ ಕೇಶವನಂಘ್ರಿ ಧ್ಯಾಸವ ಮರೆತೆ ||ಪ||

ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ
ಅತಿವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ
ಅತಿಸಿರಿಯ ಭೂತ ನಿನ್ನ ಮತಿಗೆಡಿಸಿತೇನೆಲೂ
ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ ||೧||

ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ
ಕೀಳು ಸಂಸಾರದ ಮಹ ಗೋಳು ಭೂತ್ಹಿಡಿತೇ
ಸಾಲಿಗಳ ಭಯಭೂತ ನಾಲಿಗೆಯ ಸೆಳೆಯಿತೇ
ನೀಲಶಾಮನ ಭಜನ ಫಲವ ಮರೆತ್ಯೆಲ್ಲೊ ||೨||

ಪೋದವಯ ಪೋಯಿತು ಆದದ್ದಾಗ್ಹೋಯಿತು
ಪಾದದಾಸರ ಕೂಡಿ ಶೋಧ ಮಾಡಿನ್ನು
ಭೂಧವ ಶ್ರೀರಾಮನ ಪಾದವನು ನಂಬಿ ಭವ-
ಬಾಧೆ ಗೆಲಿದಿನ್ನು ಮುಕ್ತಿಹಾದಿಯ ಕಾಣೊ ||೩||
 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರತಿ ಬೆಳಗಿರೆ ವಾರಿಧಿ ಸುತೆಗೆ


ಆರತಿ ಬೆಳಗಿರೆ ವಾರಿಧಿ ಸುತೆಗೆ
ಸಾರ ಸಂಗೀತದಿಂದಲಿ
ಸಕಲವಸ್ತುವೆನಿಸಿ  ಮುಕುತಿದಾಯಕ ಹರಿಗೆ
ಭಕುತಿಯಿಂದಲಿ  ಬಿಡದೆ ಸದಾ ಪೂಜಿಪ ಸಿರಿಗೆ
ವಿಖನಸಾಧ್ಯಮರಗಣಕೆ ಸುಖಕೊಡುವಳಿಗೆ
ಮಕರಧ್ವಜನ ಮಾತೆಯಾದ ರುಕುಮನನುಜೆಗೆ
ಚಾರುಶ್ರಾವಣಭಾರ್ಗವಶುಭವಾರದ ದಿನದಿ
ಭೂರಿಭಕ್ತಿಭರಿತಳಾಗಿ ನಮಿಸುತ ಮನುದಿನ
ಆರಾಧಿಸೆ ಷೋಡಶ ಉಪಚಾರದಿ ಮುದದಿ
ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜನೆದಿ
ತಾಮರಸಸುಧಾಮಳಾದ ಸೋಮವದನೆಗೆ
ಗೋಮಿನಿ ಸೌದಾಮಿನಿ ಸಮಕೋಮಲಾಂಗಿಗೆ
ಶ್ಯಾಮಸುಂದರಸ್ವಾಮಿ ಸುಪ್ರೇಮದ ಸತಿಗೆ
ಕಾಮಿತಫಲದಾಯಕ ಶ್ರೀಭೂಮಿಜೆ ರಮೆಗೆ  


-- ಶ್ಯಾಮಸುಂದರದಾಸರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ

ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ ||ಪ||

ಮಾತೆ ಇದ್ದರು ದೃಢವೃತನಾದ ಧ್ರುವಗೆ ಶ್ರೀ-
ಪತಿ ನೀನೆ ಗತಿಯಾದೆ ಆರಾದರಯ್ಯ
ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ
ಗತಿ ನೋಡಿ ನರಹರಿ ಗತಿಪ್ರದ ನೀನಾದೆ ||೧||

ಭ್ರಾತರಾವಣನ ಸಹಜಾತ ವಿಭೀಷಣನ ನಿ-
ರ್ಭೀತನ ಮಾಡಿ ಕಾಯ್ದವರಾರಯ್ಯ
ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ
ಸಂತೈಸಿದಾನಾಥರಕ್ಷಕ ಹರಿಯಲ್ಲವೇ     ||೨||

ಬಂಧುಗಳಿರೆ ಗಜರಾಜನ ನಕ್ರವು
ಬಂದು ಬಾಧಿಸೆ ಬಂಧ ಬಂದು ಹರಿಸಿದರ್‍ಯಾರೊ
ಅಂದು ಇಂದು ಎಂದನಿಮಿತ್ತ ಬಂಧು ನೀ
ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ ||೩||

ಸುತರು ರಕ್ಷಕರೇನೊ  ಶತಸೂನುಗಳಿಗೆ ಪಿತ
ಧೃತರಾಷ್ಟ್ರಗೆ   ಕೊನೆಗಾರಾದರಯ್ಯ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ||ಪ||
ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು||ಅ.ಪ||

ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವದು ಹರಿಚಿತ್ತವು
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿಯಾಗೋದು ಹರಿಚಿತ್ತವಯ್ಯ ||೧||

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವು
ಸದಾ ಅನ್ನದಾನವ  ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವಯ್ಯ ||೨||


ಧರಣಿಯನಾಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವು
ಪುರಂದರವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವಯ್ಯ||೩||

 

ದಾಸ ಸಾಹಿತ್ಯ ಪ್ರಕಾರ
ಬರೆದವರು