ಸಮಾಜಸುಧಾರಣೆಯಲ್ಲಿ ದಾಸಕೂಟದ ಪಾತ್ರ ( ವಿದುಷಿ ವಸಂತಮಾಧವಿ ಅವರ ಆಹ್ವಾನಿತ ಬರಹ)

ಸಮಾಜಸುಧಾರಣೆಯಲ್ಲಿ ದಾಸಕೂಟದ ಪಾತ್ರ ( ವಿದುಷಿ ವಸಂತಮಾಧವಿ ಅವರ ಆಹ್ವಾನಿತ ಬರಹ)

(ಶ್ರೀಮತಿ ಟಿ. ಎಸ್. ವಸಂತಮಾಧವಿ ಅವರು ಸಂಗೀತವಿದುಷಿ ಮಾತ್ರವಷ್ಟೇ ಅಲ್ಲ; ಉತ್ತಮ ಬರಹಗಾರ್ತಿ ಕೂಡಾ. ಅವರು ದಾಸ ಸಾಹಿತ್ಯ ಹಾಗೂ ನಮ್ಮ ಸಮಾಜದ ಮೇಲೆ ಅದರ ಪ್ರಭಾವದ ಬಗ್ಗೆ ಬರೆದ ಲೇಖನವೊಂದು ಹರಿದಾಸ ಸಂಪದದ ಓದುಗರಿಗಾಗಿ ಇಲ್ಲಿದೆ. ಈ ಮೊದಲು ಈ ಬರಹವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸ್ವರ್ಣಸೇತು ಸಂಚಿಕೆಯಲ್ಲಿ ಪ್ರಕಟವಾಗಿತ್ತು. - ಹಂಸಾನಂದಿ) ಸಂಗೀತವು ನಮ್ಮ ದೇಶದ, ಧರ್ಮದ, ಸಂಸ್ಕೃತಿಯ ಹಾಗೂ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ. ವೇದಗಳ ಕಾಲದಿಂದಲೂ, ಸಂಗೀತಕ್ಕೆ ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ರಿಯೆಗಳಲ್ಲಿಯೂ ಪಾತ್ರವಿರುವುದು ಕಂಡುಬಂದಿದೆ. ಯಜ್ಙ ಯಾಗಾದಿಗಳು ನಡೆಯುವಾಗಲೂ, ನಿಶ್ಚಿತ ಸಮಯಗಳಲ್ಲಿ, ಇಂತಿಂತಹ ವೇದಮಂತ್ರಗಳನ್ನು ಸಾಮಕರು ಗಾಯನಮಾಡಬೇಕೆನ್ನುವ ವಿಧಿ ಇತ್ತು. ವೇದಗಳು ಕೇವಲ ಧಾರ್ಮಿಕ ಅಂಶಗಳನ್ನು ಮಾತ್ರ ತಿಳಿಸುವುದಿಲ್ಲ. ಸಾಮಾಜಿಕ ವ್ಯವಸ್ಥೆ ನೇರವಾಗಿರಲು ಬೇಕಾದ ಅನೇಕಾನೇಕ ಸೂತ್ರಗಳನ್ನು ವಿಧಿ - ನಿಷೇಧಗಳ ಮೂಲಕ ಖಚಿತವಾಗಿ ಬೋಧಿಸುತ್ತವೆ. ಇವೆಲ್ಲವೂ ವಿದ್ಯಾವಂತರಾದವರಿಗೆ, ಪಂಡಿತರಿಗೆ ಅರ್ಥವಾಗುವ ಸಂಸ್ಕೃತ ಭಾಷೆಯಲ್ಲಿವೆ. ಮುಂದೆ ಸುಮಾರು ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು, ದೇವ-ದೇವತೆಗಳ ಪರವಾಗಿ ಸ್ತೋತ್ರಗಳನ್ನು ರಚಿಸುವುದರೊಡನೆ, ಸಂಸಾರದಲ್ಲಿನ ಲೋಪದೋಷಗಳನ್ನೂ ಎತ್ತಿ ಹೇಳುತ್ತ, ಈ ದೋಷಯುಕ್ತ ಜೀವನದಿಂದ ಮುಕ್ತರಾಗಲು ಭಗವಂತನೆಡೆಗೆ ಮನಸ್ಸು ತಿರಿಗಿಸುವುದನ್ನು ಪರಿಹಾರವೆಂದು ಸೂಚಿಸಿದ್ದಾರೆ. ಇದೆಲ್ಲವೂ ಸಹ ಸಂಸ್ಕೃತ ಭಾಷೆಯಲ್ಲಿಯೇ ಇರುವುದು. ಹನ್ನೊಂದನೇ ಶತಮಾನದಲ್ಲಿ, ದೇವರದಾಸಿಮಯ್ಯನಿಂದ ಆರಂಭವಾದ ಶರಣಸಾಹಿತ್ಯ ಸಂಪತ್ತು, ಹನ್ನೆರಡನೇ ಶತಮಾನದಲ್ಲಿ ಪರ್ವಕಾಲ ಮುಟ್ಟಿತೆನ್ನಬಹುದು. ಭಕ್ತಿ ಭಂಡಾರಿ ಬಸವಣ್ಣನವರು, ಅಕ್ಕಮಹಾದೇವಿ, ಅಲ್ಲಮಪ್ರಭು, ನಿಜಗುಣಶಿವಯೋಗಿ, ಸರ್ಪಭೂಷಣಶಿವಯೋಗಿ ಮುಂತಾದವರು ರಚಿಸಿದ ಸಾಹಿತ್ಯವು ಸರಳ ಕನ್ನಡ ಭಾಷೆಯಲ್ಲಿದ್ದು ಸಮಾಜದ ಎಲ್ಲ ವರ್ಗದ ಜನರನ್ನೂ ಸುಲಭವಾಗಿ ತಲುಪುವಂತಾಯಿತು. ಇಲ್ಲಿ ಜಾತಿ ಮತಗಳ ನಿರ್ಬಂಧವಿಲ್ಲ. ಹೆಣ್ಣು ಗಂಡೆಂಬ ಭೇಧವಿಲ್ಲ. ಮೇಲು ಕೀಳೆಂಬ ಅಂತರವಿಲ್ಲ. ಸಮಾಜದ ಪ್ರತಿ ವ್ಯಕ್ತಿಗೂ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವಚನಗಳ ಮೂಲಕ ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯವಿತ್ತು. ವೇದಗಳಲ್ಲಿನ ಸಾರವನ್ನು, ಸಮಾಜದ ಅಂಕುಡೊಂಕುಗಳನ್ನು, ನಡೆನುಡಿಯಲ್ಲಿರಬೇಕಾದ ರೀತಿ ನೀತಿಗಳನ್ನೂ, ಜನಸಾಮಾನ್ಯರಿಗೂ ಅರ್ಥವಾಗುವಂತಹ ತಿಳಿಯಾದ ಭಾಷೆ, ಸರಳರೀತಿ, ಆಡುನುಡಿಯನ್ನು ಅವಲಂಬಿಸಿದ ಮಾಧ್ಯಮ ಮನೆಮನೆಗೂ ಮನಮನಕ್ಕೂ ತಲುಪಿಸಲು ಸಮರ್ಥವಾಯಿತು. ಬಸವಣ್ಣನವರ ಈ ವಚನವನ್ನು ನೋಡಿ :--- "ನೂರನೋದಿ ನೂರ ಕೇಳಿದರೇನು ? ಆಸೆ ಹರಿಯದು, ರೋಷಬಿಡದು, ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿ ದೊಂಬರ ನೋಡಿನಗುವ ನಮ್ಮ ಕೂಡಲಸಂಗಮದೇವ." ಇದೇ ಭಾವವನ್ನು ಬೇರೆ ಮಾತುಗಳಿಂದ ತಿಳಿಸಿರುವ ಈ ವಚನವನ್ನು ನೋಡಿ -- "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದು ಅಹುದು ಎನ್ನಬೇಕು, ನುಡಿಯೊಳಗಾಗಿ ನಡೆಯದಿದ್ದೊಡೆ ಕೂಡಲಸಂಗಮದೇವನೆಂತೋಡಿ ಬಹನಯ್ಯ". ಮತ್ತೊಂದು ವಚನದಲ್ಲಿ, ಒಬ್ಬರೊಡನೊಬ್ಬರು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಬಹಳ ಸುಂದರವಾಗಿ ಹೇಳಿದ್ದಾರೆ :-- "ಕಳಬೇಡ, ಕೊಲಬೇಡ, ಹುಸಿಯನುಡಿಯಲುಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ" ಹೀಗೆ, ಸಮಾಜದಲ್ಲಿನ, ಜನರಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿ ಅವುಗಳ ಪರಿಹಾರಮಾರ್ಗವನ್ನೂ ಸೂಚಿಸುವ ನುಡಿಮುತ್ತುಗಳುಳ್ಳ ಸಹಸ್ರಾರು ವಚನಗಳು ನಮ್ಮ ಜ್ಞಾನ ಭಂಡಾರವನ್ನು ಸಮೃದ್ಧಿಗೊಳಿಸಿವೆ. ಸುಮಾರು ಎರಡು - ಎರಡೂವರೆ ಶತಮಾನಗಳ ನಂತರ ಇದೇ ರೀತಿಯ ಕಾರ್ಯವನ್ನು ತಮ್ಮದೇ ಆದ ವಿಧಾನದಲ್ಲಿ ಮುಂದುವರೆಸಿದವರು, ಪುರಂದರದಾಸ - ಕನಕದಾಸರಾದಿಯಾದ ದಾಸಶ್ರೇಷ್ಠರು. ಹದಿನೈದನೇ ಶತಮಾನವು ದಾಸಕೂಟದ ಸುವರ್ಣಯುಗವೆನ್ನಲು ಅಡ್ಡಿಯಿಲ್ಲ. ಈ ಕೂಟದ ಪ್ರಮುಖ ಧ್ಯೇಯವೆಂದರೆ, ಹರಿಸರ್ವೋತ್ತಮ ಮತದ ಪ್ರಚಾರ, ಭಕ್ತಿಮಾರ್ಗದ ಪ್ರಸರಣ. ದಾಸರ ಪದಗಳಲ್ಲಿ ನವವಿಧ ಭಕ್ತಿಯ ಪ್ರವಾಹವೂ ನಾನಾ ಮುಖವಾಗಿ ಹರಿದಿರುವುದು ಸರ್ವ ವಿದಿತ. ಶ್ರೀಪಾದರಾಯರು, ಶ್ರಿ ವ್ಯಾಸರಾಯರು, ವಾದಿರಾಜ - ಪುರಂದರ - ಕನಕ - ಮಹಿಪತಿ - ಜಗನ್ನಾಥ - ವಿಜಯ -ಪ್ರಸನ್ನವೆಂಕಟದಾಸರೇ ಆದಿಯಾಗಿ ದಾಸವರೇಣ್ಯರು ನೀಡಿರುವ ಸಾಹಿತ್ಯವು ಸಮುದ್ರೋಪಮವಾಗಿದೆ. ಹಾಗೆಂದು, ದಾಸಕೂಟದವರಿಗೆ ಸಾಮಾಜಿಕ ಪ್ರಜ್ಞೆ ಕಡಿಮೆ ಇತ್ತೇ ? ಖಂಡಿತ ಇಲ್ಲ. ತಮಗೆ ಆಶ್ರಯ ನೀಡಿದ ಸಮಾಜದ ಒಳಿತು-ಕೆಡುಕುಗಳ ಬಗ್ಗೆ ಅವರಿಗೆ ಅಮಿತವಾದ ಕಳಕಳಿ ಇತ್ತೆನ್ನುವುದಕ್ಕೆ, ನೂರಾರು ಪದಗಳು ಸಾಕ್ಷಿಯಾಗಿವೆ. ದಾಸಸಾಹಿತ್ಯ ಸಾಗರದಲ್ಲಿ, ಹರಿಭಕ್ತಿ, ಅಂತರಂಗನಿವೇದನೆ, ತತ್ವಬೋಧೆ, ಲೋಕನೀತಿ ಮುಂತಾದ ಹಲವಾರು ವಿಷಯಗಳ ಪ್ರತಿಪಾದನೆ ಇದೆ. ತಮ್ಮ ಸುತ್ತ ಮುತ್ತ ಇದ್ದ ಜನರ ನಡೆ ನುಡಿ, ಆಚಾರಗಳು, ವಿಚಾರಗಳು ಇತ್ಯಾದಿ ಹಲವು ಹತ್ತು ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಪರಿಹಾರಮಾರ್ಗವನ್ನೂ ಹೇಳಿದ್ದಾರೆ. ಕುಂದುಕೊರತೆಗಳನ್ನು ಹಳಿದಿದ್ದಾರೆ. ಜಾತಿಯಗೊಂದಲದಿಂದುಂಟಾದ ಸಮಸ್ಯೆಗಳನ್ನು ಖಂಡಿಸಿದ್ದಾರೆ. ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವ್ಯಕ್ತಿಯು ಹೇಗೆ ಮೇಲ್ಮೆಯನ್ನು ಸಾಧಿಸಬಹುದೆಂದು ಸೊಗಸಾದ ಭಾಷೆಯಲ್ಲಿ ತಿಳಿಸಿದ್ದಾರೆ. ದಾಸ ಸಾಹಿತ್ಯದ ಭಾಷೆ ತಿಳಿಗನ್ನಡ. ಐದು ಶತಮಾನಗಳ ಹಿಂದೆ ಬಳಕೆಯಲ್ಲಿದ್ದ ಆಡುಮಾತುಗಳನ್ನು ಈ ಪದಗಳಲ್ಲಿ ಕಾಣಬಹುದು. ಸ್ವಪ್ರತಿಷ್ಠೆ, ಅಹಂಕಾರ, ಒರಟುತನ, ನಡೆ ನುಡಿಯಲ್ಲಿನ ಸಣ್ಣತನ, ಮತ್ತೊಬ್ಬರನ್ನು ಹಗುರವಾಗಿ ಕಾಣುವ ಪ್ರವೃತ್ತಿ, ಹಿಂದೊಂದು ರೀತಿ -ಮುಂದೊಂದು ರೀತಿಯ ನಡವಳಿಕೆ, ದುರಾಸೆ - ಇಂತಹ ಗುಣಗಳು ಒಂದು ವ್ಯಕ್ತಿಗಾಗಲಿ, ಸಮಾಜದ ಒಳಿತಿಗಾಗಲೀ ಹಾನಿಕಾರಿ. ಇಂತಹ ಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವಾಗ, ದಾಸರುಗಳು ಬಳಸಿರುವ ಭಾಷೆಯೂ ಸ್ವಲ್ಪ ಬಿರುಸಾಗಿಯೇ ಇದೆಯೆನ್ನಬಹುದು. ಪುರಾಣ, ಇತಿಹಾಸಗಳ ಉದಾಹರಣೆಗಳೊಡನೆ, ಇಂದಿನ ಸಮಾಜದ ವ್ಯವಸ್ಥೆಗೂ ಅನ್ವಯಿಸುವಂತಹ ಹಲವಾರು ಸಂಗತಿಗಳನ್ನು ಬಳಸಿ, ತಾವು ಹೇಳಬೇಕಾದುದನ್ನು ನೇರವಾಗಿ, ದಿಟ್ಟವಾಗಿ ತಿಳಿಸಿದ್ದಾರೆ. ವಜ್ರವನ್ನು ಕತ್ತರಿಸಲು ವಜ್ರಕ್ಕೇ ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದರೆ, ಕೆಟ್ಟತನವನ್ನು ಮತ್ತೊಂದು ಕೆಟ್ಟತನದಿಂದಲೇ ತುಳಿಯುವುದನ್ನು ದಾಸರು ಒಪ್ಪುವುದಿಲ್ಲ. ಒಳ್ಳೆಯತನ, ಕೆಟ್ಟವರಲ್ಲಿ ಹೆಚ್ಚು ಪರಿಣಾಮಕಾರಿಯಾಗುವುದೆಂಬ ದಾಸರ ನಂಬಿಕೆ ಈ ಪದದಲ್ಲಿ ಹೇಗೆ ಮೂಡಿದೆ, ನೋಡಿ :- ಧರ್ಮವೆ ಜಯವೆಂಬ ದಿವ್ಯ ಮಂತ್ರ ಮರ್ಮವನರಿತು ಮಾಡಲುಬೇಕು ತಂತ್ರ ವಿಷವಿಕ್ಕಿದವಗೆಷಡ್ರಸವನುಣಿಸಲುಬೇಕು ದ್ವೇಷಮಾಡಿದವನ ಪೋಷಿಸಲುಬೇಕು ಹುಸಿಯಾಡಿ ಕೆಡಿಸುವನ ಹಾಡಿಹರಸಲುಬೇಕು ಮೋಸಮಾಡಿದವನಹೆಸರ ಮಗನಿಗಿಡಬೇಕು ಹಿಂದೆನಿಂದಿಪರನು ವಂದಿಸುತಲಿರಬೇಕು ಬಂಧನದೊಳಿಟ್ಟವರ ಬೆರೆಯಬೇಕು ಕೊಂದವೈರಿಯ ಮನೆಗೆ ನಡೆದುಹೋಗಲುಬೇಕು ಕುಂದೆಣಿಸುವವರ ಗೆಳೆತನಮಾಡಬೇಕು ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು ಕಂಡು ಸಹಿಸದವರ ಕರೆಯಬೇಕು ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಕೊಂಡಾಡಿ ತಾ ಧನ್ಯನಾಗಬೇಕು ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವ ಗಾದೆಮಾತು ಎಷ್ಟು ಸತ್ಯ! ಮಾತೇ ಮುತ್ತು ಮಾತೇ ಮೃತ್ಯು ಎನ್ನುವುದೂ ಅಷ್ಟೇ ಸತ್ಯ. ಈ ಪದದಲ್ಲಿ ನಾಲಿಗೆಯನ್ನು ಕುರಿತು ದಾಸರು ಹೇಳುವ ಬುದ್ಧಿಮಾತು ಹೇಗಿದೆ ನೋಡಿ :- ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ ಚಾಡಿಹೇಳಲುಬೇಡ ನಾಲಿಗೆ ನಿನ್ನ ಬೇಡಿಕೊಂಬುವೆನು ನಾಲಿಗೆ ರೂಢಿಗೊಡೆಯ ಶ್ರೀರಮಣನ ನಾಮವ ಪಾಡುತಿರು ಕಂಡ್ಯ ನಾಲಿಗೆ ದಾಸರಪದಗಳನ್ನು ದೇವರನಾಮಗಳೆಂದು ಹೇಳುವುದು ವಾಡಿಕೆ. ಏನೆಲ್ಲ ತತ್ವವಿಚಾರಗಳನ್ನು ವಿಮರ್ಶೆಮಾಡಿದಾಗಲೂ, ಎಂತೆಂತಹ ಸಮಸ್ಯೆಗಳ ಬಗ್ಗೆ ವಿಚಾರಮಾಡುವಾಗಲೂ, ಕಡೆಯಲ್ಲಿ ಆ ದೇವನ ಧ್ಯಾನ - ಭಜನೆ - ಪೂಜನದಿಂದಲೇ ಸಮಾಧಾನವೆನ್ನುವುದು ದಾಸರ ಧೃಡ ನಂಬಿಕೆ. ಹರಿಯ ನಾಮಾವಳಿಗಳ ಬಳಕೆ ಪದಗಳಲ್ಲಿನ ಅವಿಭಾಜ್ಯ ಭಾಗ. ಪುರಂದರದಾಸರ ಮತ್ತು ಕನಕದಾಸರ ಕೆಲವು ಪದಗಳ ಪ್ರಸಕ್ತ ಭಾಗಗಳ ಮೂಲಕ, ದಾಸರುಗಳು ಹೊಂದಿದ್ದ ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿಯನ್ನು ಅರಿತುಕೊಳ್ಳೋಣ. "ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ", ಎಂಬ ದೇವರನಾಮದಲ್ಲಿ ಕೆಲವು ಜನ ಹೇಗೆ ತಮಗೆ ತಿಳಿಯದಿರುವ ಕಾರ್ಯ ಮಾಡ ಹೋಗಿ ಅವಮಾನಿತರಾಗುತ್ತಾರೆಂಬುದನ್ನು, ನವಿರಾಗಿ ಜರೆದಿದ್ದಾರೆ. "ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯ್ ಬಿಡುವೆಯಲ್ಲೊ.... ಹತ್ತುಸಾವಿರ ಹೊನ್ನು ತಿಪ್ಪೇಲಿ ಹೂತಿಟ್ಟು ಮತ್ತೆ ಉಪ್ಪಿಲ್ಲದೆ ಉಂಡೆಯಲ್ಲೊ ಪ್ರಾಣಿ........." ಇದು, "ಹಲ್ಲಿದ್ದಾಗ ಕಡಲೆಯಿಲ್ಲ ಕಡಲೆ ಇದ್ದಾಗ ಹಲ್ಲಿಲ್ಲ" ಎಂಬ ಗಾದೆಗೆ ವ್ಯಾಖ್ಯಾನವೆನ್ನಬಹುದು. ಧನ, ಧಾನ್ಯಾದಿ ಸೌಕರ್ಯವಿದ್ದಾಗ ದಾನಧರ್ಮ ಮಾಡದೆ ಆಮೇಲೆ ಹಲುಬಿದರೆ ಏನು ಲಾಭ? ಹಣವನ್ನು ಸುಮ್ಮನೆ ಕೂಡಿಟ್ಟರೆ ಯಾವ ಪ್ರಯೋಜನವೂ ಇಲ್ಲ, ತಾನೂ ಅನುಭವಿಸದೆ, ಇತರರಿಗೂ ಕೊಡದೆ ಇಹ-ಪರ ಗಳೆರಡನ್ನೂ ಕಳೆದುಕೊಳ್ಳುವವರಿಗಿದು ಅನ್ವಯಿಸುತ್ತದೆ. "ನಿಂದಕರಿರಬೇಕು ............. ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ" - ಅಸೂಯೆಪಡುವವರು, ಪ್ರತಿಯೊಂದರಲ್ಲೂ ತಪ್ಪು ಹುಡುಕುವವರು ಇದ್ದರೆ, ಅನ್ಯರಿಗೆ ಅದು ಲಾಭದಾಯಕವೇ! ನಮ್ಮ ತಪ್ಪು ತಿದ್ದಿಕೊಳ್ಳಲು ಆಗುತ್ತದೆ. ಕೇರಿಯೊಳಗೊಂದು ಹಂದಿ ಇದ್ದರೆ, ಅದು ಎಲ್ಲ ಕೊಳೆಯನ್ನೂ ತಿಂದು, ಸುತ್ತಮುತ್ತಲ ಪ್ರದೇಶವು ಶುಚಿಯಾಗಲು ಸಹಾಯವಾಗುತ್ತದೆ. ಕಾರಣವಿರಲಿ, ಇಲ್ಲದಿರಲಿ ತಪ್ಪು ಹುಡುಕುವವರಿರುವುದು ನಮಗೇ ಒಳಿತೆಂಬುದು ದಾಸರ ಅಭಿಪ್ರಾಯ. "ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ" -- ಬೇವಿನೊಡನೆ ಬೆಲ್ಲ ಇರಿಸಿದ ಮಾತ್ರಕ್ಕೆ, ಬೇವಿನ ಕಹಿ ಹೋಗದು. ಹಾವಿಗೆ ಹಾಲು ಸುರಿದರೂ ಅದು ಕಕ್ಕುವುದು ವಿಷವನ್ನೇ, ಎನ್ನುವ ನಿತ್ಯಸತ್ಯವನ್ನು ಬೇರೆ ಬೇರೆ ಉದಾಹರಣೆಗಳೊಡನೆ ದಾಸರು ವಿವರಿಸಿದ್ದಾರೆ. "ನೋಡದಿರು ಪರಸ್ತ್ರೀಯರ ನೋಡಿದರೆ ಕೇಡಹುದು ತಪ್ಪದಿದ ಕೋ" - ಈ ಪದದಲ್ಲಿ ಹೇಗೆ ವಾಲಿ, ರಾವಣಾದಿಗಳು ಪರವಧುವಿನ ಕಾರಣದಿಂದಾಗಿ ನಾಶಹೊಂದಿದರೆಂದು ತಿಳಿಸುತ್ತ, ತಮ್ಮದಲ್ಲದುದಕ್ಕೆ ಆಶಿಸಬಾರದೆಂದು ಬುದ್ಧಿ ಹೇಳಿದ್ದಾರೆ. ಧನವೆಂಬುದು ದುಃಖ ಕಾರಣವೆಂದು ದಾಸರ ಅಭಿಮತ. "ರೊಕ್ಕ ಎರಡಕ್ಕು ದುಃಖ" ಮತ್ತು "ದುಗ್ಗಾಣಿ ಎಂಬುದು ದುರ್ಜನ ಸಂಗ ದುಗ್ಗಾಣಿ ಬಲು ಕೆಟ್ಟದಣ್ಣ" ಇತ್ಯಾದಿ ಪದಗಳು ಈ ಭಾವನೆಯನ್ನು ಒತ್ತಿ ಹೇಳುತ್ತವೆ. ಹಾಗೆಯೇ "ಶಕ್ತನಾದರೆ ನೆಂಟರೆಲ್ಲರು ಹಿತರು ಅಶಕ್ತನಾದರೆ ನೋಡಲವರೆ ವೈರಿಗಳು" -- ಎಂಬ ಪದದಲ್ಲಿ, ದುಡ್ಡಿದ್ದವನೇ ದೊಡ್ಡಪ್ಪ ನೆಂಬ ನಾಣ್ಣುಡಿಯನ್ನು ಎತ್ತಿ ಹಿಡಿದಿದ್ದಾರೆ. ಇಲ್ಲಿ ನಾವು ಗ್ರಹಿಸಬೇಕಾದುದು ಇಷ್ಟೇ - ನ್ಯಾಯವಾದ ಧರ್ಮವಾದ ಮಾರ್ಗದಿಂದ ಧನಾರ್ಜನೆ ಮಾಡಿ, ಅದನ್ನು ದಾನಧರ್ಮಗಳಲ್ಲಿ ವಿನಿಯೋಗಿಸಿ ಸಾರ್ಥಕಪಡಿಸಿಕೊಳ್ಳಬೇಕೇ ಹೊರತು, ಸುಮ್ಮನೆ ಹಣ ಕೂಡಿಡುವುದು ಸರಿಯಲ್ಲ. ಆರಕ್ಕೆ ಹಿಗ್ಗದೆ, ಮೂರಕ್ಕೆ ಕುಗ್ಗದೆ ಒಂದೇತೆರನಾದ ಜೀವನ ನಡೆಸುವುದು ಉತ್ತಮ. ಧನವಂತರಿಗೆ ತೋರಿಕೆಯ ಸ್ನೇಹಿತರು ಹೆಚ್ಚು. ಎಲ್ಲರೂ ಸನಿಹದವರೇ! ಬಡವನೆಂದರೆ, ಇನ್ನು ತಮಗೇ ಏನು ಖರ್ಚು ಕಷ್ಟಗಳು ಬರುವುದೋ ಎಂದು ಹಿಂದಕ್ಕೆ ಸರಿಯುವವರೇ! ಇದು ಲೋಕವೃತ್ತಿ. ನಿಂದೆಗೆ ಕುಗ್ಗದೆ, ಹೊಗಳಿಕೆಗೆ ಹಿಗ್ಗದೆ ಸಮವಾಗಿರಬೇಕೆಂಬುದೇ ಇದರಿಂದ ನಾವು ಅರಿತುಕೊಳ್ಳಬೇಕಾದುದು. "ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗ ಬೇಡ" -- ಇದೇ ಭಾವವನ್ನು ತಿಳಿಸುವ ಮತ್ತೊಂದು ಪದ. "ಸತ್ಯವಂತರಿಗಿದು ಕಾಲವಲ್ಲ ದುಷ್ಟಜನರಿಗಿದು ಸುಭಿಕ್ಷಕಾಲ" - ಕೆಲವೊಮ್ಮೆ ಒಳ್ಳೆಯವರಿಗೆ ಕಷ್ಟಗಳೇ ಕಾಡುತ್ತ, ದುರ್ಜನರಿಗೆ ಮೇಲಿಂದ ಮೇಲೆ ಒಳಿತೇ ಆಗುವುದನ್ನು ಈಗಲೂ ಕಾಣುತ್ತಿರುತ್ತೇವೆ. ಇಂತಹ ಸಂದರ್ಭಗಳಲ್ಲಿ, ಪೂರ್ವಾರ್ಜಿತ ಕರ್ಮ ಫಲ ಎಂದು ವೇದಾಂತವನ್ನು ಹೇಳುವುದು ರೂಢಿಯಾಗಿದೆ. ದಾಸರು ತಮ್ಮಕಾಲದ ಚಿತ್ರವನ್ನು ಈ ಪದದಲ್ಲಿ ಬಿಡಿಸಿದ್ದಾರೆ. ಇನ್ನು, ಜಾತಿಯ ಕಾರಣದಿಂದ ಮೇಲು - ಕೀಳು ಎನ್ನುವ, ಅಸ್ಪೃಶ್ಯ-ಹೊಲೆಯ ಎನ್ನುವ ಮಾತುಗಳಿಗೆ, ದಾಸರು ಹೇಳುವುದನ್ನು ನೋಡಿ -- "ಹೊಲೆಯ ಹೊರಗಿಹನೇ? ಊರೊಳಗಿಲ್ಲವೇ?" ಇಲ್ಲಿ ಊರು, ಈ ದೇಹವೇ. ಜೀವಕ್ಕೆ ಹೊದಿಕೆಯಾಗಿರುವ ದೇಹವೇ ಊರು(ಪುರ). ಇದರಲ್ಲಿ ಸೇರುವ ಕಲ್ಮಶದಿಂದಲೇ ಮಾನವನು ಹೊಲೆಯನಾಗುವುದು ಎನ್ನುತ್ತಾರೆ ದಾಸರು. ಹೊಲೆಯರು ಯಾರು ಯಾರು? ಮುಂದೆ ನೋಡಿ .. "ಶೀಲವನು ಕೈಗೊಂಡು ನಡೆಸದಾತನೆ ಹೊಲೆಯ. ಹೇಳಿದ ಹರಿಕಥೆಯ ಕೇಳದವ ಹೊಲೆಯ. ಆಳಾಗಿ ಅರಸಂಗೆ ಕೇಡುಬಗೆವವ ಹೊಲೆಯ. ಕೊಂಡಸಾಲಗಳ ತಿಂದದಾತನೆ ಹೊಲೆಯ. ಲಂಡತನದಲಿ ನಡೆವ ನರಭಂಡ ಹೊಲೆಯ. ಉಂಡಮನೆಗೆರಡ ಬಗೆವಾತನೆ ಹೊಲೆಯ. ಹೆಂಡತಿಯ ಇಚ್ಛೆಯವ ಹೇಡಿ ಹೊಲೆಯ". "ಕುಲವೆನ್ನುತಿಹರು ಕುಲವಾವುದು ಸತ್ಯಸುಖವುಳ್ಳ ಜನರಿಗೆ" ಎಂಬ ಪದದಲ್ಲಿಯೂ ಈ ಭಾವನೆಯೇ ಮೂಡಿದೆ. ಇನ್ನು ಬೇರೆಯವರನ್ನು ಕೀಳಾಗಿಕಾಣಲೋಸುಗವೋ, ತಮ್ಮ ಶ್ರೇಷ್ಟತೆಯನ್ನು ಸಾರಬೇಕೆಂದೋ ಅನಗತ್ಯವಾಗಿ ಮಡಿ ಮಡಿ ಎನ್ನುವವರನ್ನು ದಾಸರು ಹೇಗೆ ಮೂದಲಿಸುತ್ತಾರೆ ನೋಡಿ - "ಮಡಿಮಡಿ ಮಡಿಯೆಂದಡಿಗಡಿಗೆ ಹಾರುವೆ ಮಡಿ ಮಾಡುವ ಬಗೆ ಬೇರುಂಟು. ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ. ಹೊಟ್ಟೆಯೊಳಗಿನ ಕಾಮಕ್ರೋಧ ಮದಮತ್ಸರ ಬಿಟ್ಟು ನಡೆದರೆ ಅದು ಮಡಿಯು." "ಜಪವ ಮಾಡಿದರೇನು ತಪವ ಮಾಡಿದರೇನು ಕಪಟಗುಣ ವಿಪರೀತ ಕಲುಷ ವಿದ್ದವರು" - ಮನಸ್ಸಿನ ನಿರ್ಮಲತೆಯೇ ನಿಜವಾದ ಮಡಿ. ಸದಾಚಾರವೇ ಜಪತಪ ಎನ್ನುವುದು ಸ್ಪಷ್ಟವಾಗಿದೆಯಲ್ಲವೇ? ಸಮಯಗಳಲ್ಲಿ, ಸಂಬಂಧಗಳಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ದಾಸರು, "ಕಲ್ಲಾಗಿ ಇರಬೇಕು ಕಠಿಣಭವ ತೊರೆಯೊಳಗೆ, ಬಿಲ್ಲಾಗಿ ಇರಬೇಕು ಬಂಧು ಜನರೊಡನೆ, ಬೆಲ್ಲವಾಗಿರಬೇಕು ಬಲ್ಲವರೊಡನೆ, ಬುದ್ಧಿಯಲಿ ತನು ಮನವ ತಿದ್ದಿಕೊಳ್ಳಲಿಬೇಕು, ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ, ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು, ನಿಶಿಹಗಲು ಶ್ರೀಹರಿಯ ನೆನೆಯುತಿರಲಿಬೇಕು" --ಎಂದು ಸುಂದರವಾಗಿ ತಿಳಿಸಿದ್ದಾರೆ. ಎಷ್ಟೇ ಕಷ್ಟ ಪಟ್ಟು ಹೊರೆಹೊರೆಯಾಗಿ ಸಂಪಾದಿಸಿದರೂ, ಅದು ಬೇಕಾಗಿರುವುದು "ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ" ಎನ್ನುವ ಮಾತುಗಳಿಂದ ದಾಸರು, ಈ ಇಹ ಜೀವನದ ಅಗತ್ಯಗಳನ್ನು ಕ್ರೋಢೀಕರಿಸಿಬಿಟ್ಟಿದ್ದಾರೆ. ಎಷ್ಟಿದ್ದರೂ, ಹೊಟ್ಟೆ ತುಂಬುವಷ್ಟೇ ತಿನ್ನುವುದು, ದೇಹ ಮುಚ್ಚಲಷ್ಟೇ ಉಡುವುದು. ಚಿಂತೆ ಎನ್ನುವುದು ಯಾವ ರೀತಿಯದಾದರೂ ಆಗಿರಬಹುದು, ನಿರ್ಮಮತೆಯಿಂದ ವಿಚಾರಮಾಡಿದರೆ ಈ ಜೀವನ ಎಷ್ಟು ನಿಸ್ಸಾರವೆಂದು ಮುಂದಿನ ಪದದಲ್ಲಿ ಹೇಳಿದ್ದಾರೆ -- "ಅನುಗಾಲವು ಚಿಂತೆ ಈ ನರಜನ್ಮಕೆ, ಮನವು ಶ್ರೀ ರಂಗನ ಸೇರುವತನಕ. ಸತಿಯಿದ್ದರು ಚಿಂತೆ ಸತಿಯಿಲ್ಲದಿರೆ ಚಿಂತೆ, ಮತಿಹೀನೆ ಸತಿ ಆದರು ಚಿಂತೆ ಪೃಥ್ವಿಯೊಳಗೆ ಸತಿ ಕಡುಚೆಲ್ವೆಯಾದರೆ ಮಿತಿಮೇರೆ ಇಲ್ಲದ ಮೋಹದ ಚಿಂತೆ ಬಡವನಾದರು ಚಿಂತೆ ಬಲಿದನಾದರು ಚಿಂತೆ ಹಿಡಿಹೊನ್ನು ಕೈಯ್ಯೊಳು ಇದ್ದರು ಚಿಂತೆ ಪೊಡವಿಯೊಳಗೆ ನಮ್ಮ ಪುರಂದರವಿಟ್ಟಲನ ಬಿಡದೆ ಭಜಿಸಿದರೆ ಚಿಂತೆ ನಿಶ್ಚಿಂತೆ" ಪ್ರದರ್ಶನ ಮಾಡಬೇಕಾದಾಗ ಗಮನಿಸಬೇಕಾದ ಸಂಗತಿಗಳನ್ನೂ, ವ್ಯವಹಾರದ ಸೂಕ್ಷ್ಮಗಳನ್ನೂ ಈ ಪದದಲ್ಲಿ ತಿಳಿಸಿದ್ದಾರೆ -- "ವರಕವಿಗಳಮುಂದೆ ನರಕವಿಗಳ ವಿದ್ಯೆ ಮಾಡಬಾರದು ಪಾಪಿಗಳಿದ್ದಲ್ಲಿ ರೂಪುಳ್ಳವಸ್ತುವ ತೋರಬಾರದು ಬಹುಕೋಪಿಗಳಿದ್ದಲ್ಲಿ ಅನುಭವಗೋಷ್ಟಿಯ ಮಾಡಬಾರದು ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡು ಹೂಡಬಾರದು ಬಹು ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು" ಯಾವ ಕಾಲಕ್ಕೂ, ಎಂತಹ ಪರಿಸ್ಥಿತಿಯಲ್ಲಿಯೂ ಅನ್ವಯಿಸಬಹುದಾದ ನುಡಿಮುತ್ತುಗಳು ಹರಿದಾಸರ ಪದಗಳಲ್ಲಿ ಮೂಡಿವೆ. ಇಂತಹ ಪದಗಳೆಷ್ಟೋ ಎಣಿಕೆಗೆ ಸಿಕ್ಕದವು. ಹರಿಭಕ್ತಿಯನ್ನು ಸಾರುವುದು ಅವರ ಗುರಿಯಾದರೂ, ಸಮಾಜದ ಲೋಪದೋಷಗಳನ್ನೂ, ಕುಂದುಕೊರತೆಗಳನ್ನೂ ಎತ್ತಿತೋರಿಸಿ, ಹರಿಚಿಂತನೆಯಲ್ಲಿ ಮನಸ್ಸು ಕೊಡುವುದೇ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರವೆಂದೂ, ಇದರಿಂದಲೇ ಮಾನವ ಜನ್ಮದ ಸಾಫಲ್ಯವೆಂದು ತಮ್ಮ ಅಭಿಪ್ರಾಯರೂಪವಾಗಿ ತಿಳಿಸಿದ್ದಾರೆ. ಜಾತಿಯಿಂದಾಗಿ ಪುರಂದರದಾಸರಿಗೆ ಯಾವ ತೊಡಕೂ ಆಗಿರಲಿಲ್ಲ. ಆದರೆ ಕನಕದಾಸರಿಗೆ ಅದರಿಂದ ಬಹಳ ತೊಂದರೆ ಆಗಿದ್ದಿರಬೇಕು. ಅವರು ಹುಟ್ಟಿನಿಂದ ಕುರುಬರು. ಉಡುಪಿಯಲ್ಲಿ ಅವರಿಗೊದಗಿದ ಪರಿಸ್ಥಿತಿ ಎಲ್ಲರಿಗೂ ತಿಳಿದಿರುವುದೇ. ಅವರು ಎಂತಹ ನಿಷ್ಠಾವಂತ ಹರಿಭಕ್ತರೆನ್ನುವುದು ಜನರಿಗೆ ಅರಿವಾಗುವ ಹೊತ್ತಿಗೆ, ಅವರಿಗೆ ಸಾಕಷ್ಟು ಬಾಧೆಗಳೊದಗಿದ್ದುವು. ಹುಟ್ಟು, ಕುಲ, ಜಾತಿಗಳ ಬಗ್ಗೆ ಅವರು ಆಡಿರುವ ಮಾತುಗಳನ್ನು ಸ್ಮರಿಸುತ್ತ, ಈ ಲೇಖನವನ್ನು ಮುಗಿಸೋಣ -- "ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೇನಾದರು ಬಲ್ಲಿರಾ? ಜಲವೆ ಸಕಲ ಕುಲಕ್ಕೆ ತಾಯಲ್ಲವೆ? ಜಲದ ನೆಲೆಯನೇನಾದರು ಬಲ್ಲಿರಾ? ಜಲದಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ ನೆಲೆಯನರಿತು ನೀ ನೆನೆಕಂಡ್ಯ ಮನುಜ ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಯು ಇಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಸಿರಿಕಾಗಿನೆಲೆಯಾದಿ ಕೇಶವರಾಯನ ಚರಣಕಮಲವ ಕೀರ್ತಿಸುವನೆ ಕುಲಜ".