ಶ್ರೀ ಪುರಂದರದಾಸರು - ಎಮ್.ಎಲ್.ವಸಂತಕುಮಾರಿ ಅವರಿಂದ ಕಿರುಬರಹ

ಶ್ರೀ ಪುರಂದರದಾಸರು - ಎಮ್.ಎಲ್.ವಸಂತಕುಮಾರಿ ಅವರಿಂದ ಕಿರುಬರಹ

ಸಂಗೀತ ಕಲಾನಿಧಿ ಡಾ.ಎಮ್.ಎಲ್. ವಸಂತಕುಮಾರಿ ಅವರು ಪುರಂದರದಾಸರ ರಚನೆಗಳು ಹಾಡುಗಾರಿಕೆಯಲ್ಲಿ ಕರ್ನಾಟಕದ ಹೊರಗೆ ಪ್ರಸಿದ್ಧಿಯನ್ನು ಪಡೆಯಲು ಕಾರಣರಾದವರಲ್ಲಿ ಒಬ್ಬ ಮುಖ್ಯ ಸಂಗೀತಗಾರರು. ಅವರ ಒಂದು ಬರಹ ಇಲ್ಲಿದೆ: ಮೂಲ ತಮಿಳು ಲೇಖನ: ಡಾ.ವಸಂತಕುಮಾರಿ ಕನ್ನಡಕ್ಕೆ ಅನುವಾದ: ಶೈಲಾಸ್ವಾಮಿ ************************************************************************** 13ನೆಯ ಶತಮಾನದಿಂದ 18ನೆಯ ಶತಮಾನದ ವರೆಗೆ ಪ್ರಖ್ಯಾತಿ ಪಡೆದಿದ್ದ ದಾಸಕೂಟ ವರ್ಗದವರಲ್ಲಿ ವ್ಯಾಸರಾಯರು, ನರಹರಿ ತೀರ್ಥರು, ಶ್ರೀ ಪಾದರಾಯರು, ಶ್ರೀ ವಾದಿರಾಜಸ್ವಾಮಿ, ಶ್ರೀ ಪುರಂದರ ದಾಸರು ಮುಖ್ಯರಾದವರು. ಇವರಲ್ಲಿ ಶ್ರೀ ಪುರಂದರ ದಾಸರು ನಮಗೆ ಲಕ್ಷ್ಯ ಸಂಗೀತಕ್ಕೆ ನೀಡಿರುವ ಕೊಡುಗೆ ಅಪಾರ. ಮಹಾನುಭಾವರಾದ ಶ್ರೀ ಪುರಂದರ ದಾಸರು ತೋರಿಸಿರುವ ಮಾರ್ಗವನ್ನು ಅನುಸರಿಸಿಯೇ ನಂತರದ ವಾಗ್ಗೇಯಕಾರರಾದ ಶ್ರೀ ತ್ಯಾಗಬ್ರಹ್ಮಂ, ಶ್ರೀ ಮುತ್ತುಸ್ವಾಮಿ ದೀಕ್ಷಿತರು, ಶ್ರೀ ಶ್ಯಾಮಾಶಾಸ್ತ್ರಿಗಳು, ಶ್ರೀ ಕ್ಷೇತ್ರಜ್ಞರು, ಹಾಗೆಯೇ ಇನ್ನೂ ಹಲವಾರು ಸಂಗೀತ ವಿದ್ವಾಂಸರು ಲಕ್ಷ್ಯ ಸಂಗೀತಕ್ಕೆ ಅವಶ್ಯಕವಾಗಿರುವ ವಿಚಾರಗಳನ್ನು ಸಾಕಷ್ಟು ನೀಡಿದ್ದಾರೆ. ಶ್ರೀ ತ್ಯಾಗರಾಜ ಸ್ವಾಮಿಯವರ ತಾಯಿಯವರಿಗೆ ಶ್ರೀ ಪುರಂದರ ದಾಸರ ಅನೇಕ ರಚನೆಗಳು ಬಾಯಿಪಾಠ ಆಗಿತ್ತಂತೆ. ಅವರು ಹಾಡುತ್ತಿದ್ದ ಆ ಕೀರ್ತನೆಗಳನ್ನು ಕೇಳಿಯೇ ಶ್ರೀ ತ್ಯಾಗರಾಜರೂ ಸಹಾ ಅವುಗಳನ್ನು ಅನುಸರಿಸಿಯೇ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ಹಿರಿಯರು ಹೇಳಿದ್ದಾರೆ. ಶ್ರೀ ಪುರಂದರ ದಾಸರ ಕೀರ್ತನೆಗಳಲ್ಲೂ ಮತ್ತು ಶ್ರೀ ತ್ಯಾಗರಾಜರ ಕೀರ್ತನೆಗಳಲ್ಲೂ ಭಾವಾರ್ಥಗಳ ಸಾಮ್ಯತೆ ಇರುವುದನ್ನು ಗಮನಿಸಬಹುದು. ಆದಕಾರಣ ಆ ಬಂಧವನ್ನು ಅನುಸರಿಸಿಯೇ ನಾವು ಇಂದಿಗೂ ಹಾಡುತ್ತಾ ಇದ್ದೇವೆ ಎಂಬುದು ನಿಗದಿತವಾಗಿದೆ. ನವಕೋಟಿಗಳಿಗೆ ಒಡೆಯನಾಗಿ, ಜುಗ್ಗರಲ್ಲಿ ಜುಗ್ಗನಾಗಿ ಬದುಕಿದ ಶ್ರೀ ಪುರಂದರ ದಾಸರು ದೇವರ ಲೀಲೆಯಿಂದ ಮಮತೆ ತೊರೆದ ಕಥೆ ಎಲ್ಲರೂ ಅರಿತಿರುವ ವಿಚಾರವೇ. ಹಾಗೆ ಮನಸ್ಸು ಬದಲಾದ ಮೇಲೆ ಇಷ್ಟಾನಿಷ್ಟಗಳನ್ನೆಲ್ಲಾ ತೊರೆದು ತನ್ನ ಆಸ್ತಿ ಎಲ್ಲವನ್ನೂ ತ್ಯಾಗ ಮಾಡಿ ತನ್ನ ಪತ್ನಿಯೊಂದಿಗೆ ಆ ಕಾಲದಲ್ಲಿ ವಿಜಯನಗರದಲ್ಲಿ ವಾಸಿಸುತ್ತಿದ್ದ ಮಹಾನ್ ಶ್ರೀ ವ್ಯಾಸರಾಯರಿಗೆ ಶರಣಾಗತರಾದರು. ಗುರು ಶ್ರೀ ವ್ಯಾಸರಾಯರ ಉಪದೇಶದಂತೆ ಅಂದಿನಿಂದ ವಿಠಲನ ಬಗ್ಗೆ ಹಾಡಿ ಆನಂದ ಅನುಭವಿಸುತ್ತಿದ್ದರು. ಉಳಿದ ಆಯುಷ್ಯವನ್ನೆಲ್ಲಾ ಊಂಚ ವೃತ್ತಿ ಮಾಡಿಯೇ ಕಳೆದ ಆ ಮಹಾತ್ಮರಿಗೆ ಶ್ರೀ ವ್ಯಾಸರಾಯರು ಪುರಂದರದಾಸ ಎಂಬ ನಾಮಧೇಯವನ್ನು ನೀಡಿದರು. ಶ್ರೀ ಪಾಂಡುರಂಗನ ಬಗ್ಗೆಯ ರಚನೆಗಳನ್ನೇ ಹಾಡುತ್ತಾ ಈ ಲೋಕದಲ್ಲಿ ಭಕ್ತಿ ಪ್ರಚಾರ ಮಾಡಿ ಅನೇಕ ಕೀರ್ತನೆಗಳನ್ನು ಕನ್ನಡ ಭಾಷೆಯಲ್ಲಿ ರಚಿಸಿದರು. ಅವರ ಸ್ವಯಂ ಜ್ಞಾನ ಮಾರ್ಗಕ್ಕೆ ಕಾರಣವಾಗಿದ್ದ ತನ್ನ ಪತ್ನಿಯ ಬಗ್ಗೆಯೇ, “ಆದದ್ದೆಲ್ಲಾ ಒಳಿತೇ ಆಯಿತು – ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು||” ಎಂದು ತಮ್ಮ ಪ್ರಥಮ ರಚನೆಯಲ್ಲೇ ಹಾಡಿದ್ದಾರೆ. “ಆಗಿದ್ದೆಲ್ಲವೂ ಒಳ್ಳೆಯದಕ್ಕೇನೇ. ಶ್ರೀ ಪಾಂಡುರಂಗನ ಕೃಪಾಕಟಾಕ್ಷ ದೊರಕಿತು. ಕೋಟ್ಯಾಧಿಪತಿ ಎಂದು ಗರ್ವದಿಂದಿದ್ದೆ. ಈಗ ಅಕ್ಷಯ ಪಾತ್ರೆಯನ್ನು ಹಿಡಿದುಕೊಂಡಿರುವೆ. ತುಳಸಿಯನ್ನು ಅಲಕ್ಷ್ಯ ಮಾಡಿದ್ದೆ ಈಗ ತುಳಸಿ ಹಾರವನ್ನು ಧರಿಸಿ ದಾಸನಾದೆ. ನಾನು ರಾಜನೆಂದು ತಿಳಿದುಕೊಂಡಿದ್ದೆ. ಆದರೆ ಬಿಕ್ಷಾ ಪಾತ್ರೆ ಹಿಡಿದುಕೊಂಡಿದ್ದೇನೆ. ಹೀಗೆ ಮಾಡಿದ ಹೆಂಡತಿಯ ವಂಶ ಉದ್ಧಾರವಾಗಲಿ.” ಎಂಬುದೇ ಈ ರಚನೆಯ ತಾತ್ಪರ್ಯ. ಶ್ರೀ ಪುರಂದರ ದಾಸರು 4,75,000 ಕೀರ್ತನೆಗಳನ್ನು ರಚಿಸಿರುವರೆಂದು ಅವರ ಶಿಷ್ಯರಾದ ಶ್ರೀ ವಿಜಯ ವಿಠಲರ ಗ್ರಂಥದಿಂದ ತಿಳಿದು ಬರುತ್ತದೆ. ಇವಿಷ್ಟಲ್ಲದೇ ಕರ್ನಾಟಕ ಸಂಗೀತ ಕಲಿಯಲು ಪ್ರಾರಂಭಿಕ ಅಭ್ಯಾಸಕ್ಕೆಂದು ಸ್ವರಾವಳಿ, ಅಲಂಕಾರಗಳು, ಲಕ್ಷ್ಯ ಲಕ್ಷಣ ಗೀತೆಗಳು, ತಾಳಮಾಲಿಕೆ ಎಂದು ಹೇಳಲ್ಪಡುವ ಸುಳಾದಿಗಳು, ಉಗಾಭೋಗಗಳು…. ಹೀಗೆ ಇನ್ನೂ ಹಲವಾರು ಚಿಕ್ಕ ಪುಟ್ಟ ರಚನೆಗಳನ್ನೂ ಮಾಡಿದ್ದಾರೆ. ಕೀರ್ತನೆ ಎಂಬ ಪದ್ಧತಿಯನ್ನೂ, ಅದರಲ್ಲಿ ಪಲ್ಲವಿ, ಅನುಪಲ್ಲವಿ, ಚರಣ ಮುಂತಾದವನ್ನು ಮೊದಲು ಜಾರಿಗೆ ತಂದ ಮಾರ್ಗದರ್ಶಿ ಶ್ರೀ ಪುರಂದರ ದಾಸರು. ಶ್ರೀ ಪುರಂದರ ದಾಸರ ಸಾಹಿತ್ಯ ಮಹಿಮೆಗಳ ಬಗ್ಗೆ ಆಲೋಚಿಸಿದಾಗ ತ್ರಿವೇಣಿ ಸಂಗಮದಂತೆ ಕರ್ನಾಟಕ, ಮಹಾರಾಷ್ಟ್ರ, ಹಿಂದೂಸ್ತಾನಿ ಈ ಮೂರು ಭಾಷೆಗಳಲ್ಲೂ ಇರುವ ಜೀವರಸಗಳು ಸುಂದರವಾಗಿ ಕಂಡುಬರುತ್ತವೆ. ಮಾರ್ಗ, ದೇಶಿ ಎಂಬ ಎರಡು ಮಾರ್ಗಗಳನ್ನೂ ಸೇರಿಸಿ ತನ್ನದೇ ಆದ ಒಂದು ಶೈಲಿಯನ್ನು ಅಳವಡಿಸಿಕೊಂಡವರು ಶ್ರೀ ಪುರಂದರರು. ಅವರ ಕೀರ್ತನೆಗಳಲ್ಲಿ ವೇದ ಪರಿಮಾಣಗಳು, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ, ಉಪನಿಷತ್ತಿನ ಸ್ವರಗಳು, ಧರ್ಮ, ನೀತಿ, ಮಾನವನ ಜೀವನಕ್ಕೆ ಅತ್ಯವಶ್ಯಕವಾದ ನನ್ನಡತೆಗಳು, ಸಮರ್ಥವಾಗಿ ಅಭಿನಯಿಸಲು ಅವಕಾಶವೀಯುವ ಅಂಶಗಳು ಎಲ್ಲವೂ ತುಂಬಿ ತುಳುಕುತ್ತಿವೆ. ಶ್ರೀಮದ್ ಭಾಗವತದ ಸ್ವರಗಳೊಂದಿಗೆ ಶ್ರೀ ಕೃಷ್ಣನ ಲೀಲೆಗಳ ಬಗ್ಗೆಯೂ ಅನೇಕ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಅದರಂತೆಯೇ ತಿರುಪತಿ ಶ್ರೀನಿವಾಸನ ಬಗ್ಗೆಯೂ ಅನೇಕ ಹಾಡುಗಳನ್ನು ರಚಿಸಿದ್ದಾರೆ. ಹಾಗೆಯೇ ಕಾಳಹಸ್ತಿ, ಕಾಂಚಿಪುರಂ, ಶ್ರೀರಂಗಂ, ಮದುರೈ, ರಾಮೇಶ್ವರಂ ಮುಂತಾದ ಪುಣ್ಯ ಸ್ಥಳಗಳ ಯಾತ್ರೆ ಮಾಡಿ ದರುಶನ ಪಡೆದ ದೇವರ ಮೇಲೆಲ್ಲ ಹಾಡಿ ಆನಂದ ಹೊಂದಿದ್ದಾರೆ. ದಾಸರು ಬಹಳ ವರ್ಷಗಳ ಕಾಲ ಹಂಪಿಯಲ್ಲಿ ವಾಸವಾಗಿದ್ದರು. ::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::