ಶ್ರೀ ಗೋಪಾಲದಾಸರ ಪರಿಚಯ

ಶ್ರೀ ಗೋಪಾಲದಾಸರ ಪರಿಚಯ

ಶ್ರೀ ಗೋಪಾಲದಾಸರು ಹರಿದಾಸ ಸಾಹಿತ್ಯ ಶ್ರೀ ಪಾದರಾಜರಿಂದ ಮೊದಲಾಗಿ ವ್ಯಾಸರಾಯರು ವಾದಿರಾಜರುಗಳಿಂದ ಉಳಿದು ಬೆಳೆದು ಪುರಂದರ ಹಾಗೂ ಕನಕದಾಸರುಗಳಿಂದ ಉನ್ನತಿಯನ್ನು ಕಂಡು ನಂತರ ಕೆಲಕಾಲ ಅಜ್ಞಾತವಾಸವನನುಭವಿಸಿತು. ಮುಂದೆ ನೂರಾರು ವರ್ಷಗಳ ನಂತರ ಶ್ರೀ ರಾಘವೇಂದ್ರಸ್ವಾಮಿಗಳ ನೇತೃತ್ವದಲ್ಲಿ ಪುನಃ ದಾಸಕೂಟವೂ ಪ್ರಾರಂಭವಾಯಿತು. ಅವರ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ಬೆಳಕಿಗೆ ಬಂದರು. ಹೀಗೆ ದಾಸ ಸಾಹಿತ್ಯದ ಮರುಹುಟ್ಟು, ಬೆಳವಣಿಗೆಗೆ ಕಾರಣರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ರಚನೆಗಳು ವಿಜಯದಾಸರಿಂದ ಪ್ರಾರಂಭವಾಯಿತು ಎನ್ನಲಾಗಿದೆ. ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು. ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ. ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು . ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು. ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು. ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು. ಸಾಮಾನ್ಯವಾಗಿ ಗುರುಗಳು ತಮ್ಮ ಶಿಷ್ಯನಿಗೆ ಅಂಕಿತವನ್ನು ಕೊಡುವಾಗ ಅಂಕಿತಪದವೊಂದನ್ನು ರಚಿಸುತ್ತಾರೆ. ಅದು ಹೊಸ ಶಿಷ್ಯನ ಅಂಕಿತದಿಂದ ಪ್ರಾರಂಭವಾಗಿ ಗುರುಗಳ ಅಂಕಿತದೊಂದಿಗೆ ಕೊನೆಗೊಳ್ಳುತ್ತದೆ. ಗೋಪಾಲದಾಸರಿಗೆ ಸಂಬಂಧಪಟ್ಟ ವಿಜಯದಾಸರು ರಚಿಸಿದ ಅಂಕಿತ ಪದ ಹೀಗಿದೆ. ಗೋಪಾಲವಿಠಲ ನಿನ್ನ ಪೂಜೆಮಾಡುವೆನು ಕಾಪಾಡೊ ಈ ಮಾತನು ||ಪ|| ಅಪಾರ ಜನುಮದಲಿಡಿವನಮ್ಯಾಲೆ ನೀ ಪ್ರೀತಿಯನು ಮಾಡಿ ನಿಜದಾಸರೊಳಿಡು ||ಅ.ಪ|| ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ ಮಂಕು ಜನುಮಜನುಮದಲಿದ್ದ ಪಂಕವಾರವ ತೊಲಗಿಸಿ ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು ಸಂಕಟಗಳಟ್ಟಿ ದಾರಿಗೆ ವೆಂಕಟಕೃಷ್ಣನು ನೀನೆ ವಿಜಯವಿಠಲ ಎಂದು ಅಂಕುರವ ಪಲ್ಲೈಸಿ ಫಲಪ್ರಾಪ್ತಿಯಾಗಲೋ|| ಅಂಕಿತ ಪಡೆದಬಳಿಕ ಗೋಪಾಲದಾಸರು ‘ಗೋಪಾಲವಿಠಲ’ ಅಂಕಿತದಿಂದ ಕೃತಿರಚನೆ ತೊಡಗಿದರು. ನಂತರ ಇವರು ತಾವೇ ತಮ್ಮ ತಮ್ಮಂದಿರಿಗೆ ವರದಗೋಪಾಲವಿಠಲ (ಸೀನಪ್ಪದಾಸರು), ಗುರುಗೋಪಾಲವಿಠಲ (ದಾಸಪ್ಪದಾಸರು), ತಂದೆಗೋಪಾಲವಿಠಲ (ರಂಗಪ್ಪದಾಸರು) – ಎಂಬ ಅಂಕಿತನಾಮಗಳನ್ನು ಕೊಟ್ಟರು. ಒಮ್ಮೆ ಉತ್ತರಾಧಿಮಠದ ಮಠಾಧಿಪತಿಗಳಾದ ಶ್ರೀ ಸತ್ಯಬೋಧರು ಈ ಅಣ್ಣ ತಮ್ಮಂದಿರನ್ನು ಪರೀಕ್ಷಿಸಲು ಮೂವರು ಸೋದರರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಮೂವರೂ ಕೂಡಿ ಒಂದೇ ಪದವನ್ನು ರಚಿಸುವಂತೆ ಆಜ್ಞಾಪಿಸಿದರು. ಆಗ ‘ಮಾರ ಮದಘನ ಸಮೀರ‘ ಎಂಬ ಕೃತಿಯ ಪಲ್ಲವಿ, ಅನುಪಲ್ಲವಿ ಹಾಗೂ ಮೂರನೆಯ ಚರಣವನ್ನು ಗೋಪಾಲದಾಸರು, ಒಂದು ಮತ್ತು ಎರಡನೆಯೆ ಚರಣಗಳನ್ನು ಸೀನಪ್ಪದಾಸರು ಹಾಗೂ ದಾಸಪ್ಪದಾಸರೂ ರಚಿಸಿದರು. ಈ ಸೋದರರ ಅಪರೋಕ್ಷ ಜ್ಞಾನವನ್ನು ಕಂಡ ಮಠಾಧಿಪತಿಗಳು, “ನೀವು ಮೂವರೂ ನಮ್ಮ ಮಠಕ್ಕೆ ಕಾಮದೇನು, ಕಲ್ಪವೃಕ್ಷ, ಚಿಂತಾಮಣಿಗಳಂತೆ ಇರುವಿರಿ” ಎಂದು ಕೊಂಡಾಡಿದರು. ಅನಂತರ ಉಡುಪಿಯ ಕೃಷ್ಣನ ದರ್ಶನಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮಂಡಗದ್ದೆಯ ಭೀಮ ಎಂಬ ದರೋಡೆಕೋರನನ್ನು ಸನ್ಮಾರ್ಗಕ್ಕೆ ತಂದು ಉದ್ಧರಿಸಿದರೆಂಬ ಖ್ಯಾತಿ ಅವರಿಗೆ ಇದೆ. ಉತ್ತನೂರಿನಲ್ಲಿ ಶ್ರೀನಿವಾಸಾಚಾರ್ಯರೆಂಬುವರ (ಭಾವಿ ಜಗನ್ನಾಥ ದಾಸರು) ಬಳಿ ಬಂದರು. ಅವರು ಹೊಟ್ಟೆನೋವಿನಿಂದ ನರಳುತ್ತಿದ್ದುದನ್ನು ನೋಡಿ ಅವರಿಗೆ ಎರಡು ಜೋಳದ ರೊಟ್ಟಿಗಳನ್ನು ಪ್ರಸಾದವೆಂದು ಕೊಟ್ಟರು. ಅದನ್ನು ತಿಂದ ಶ್ರೀನಿವಾಸಾಚಾರ್ಯರಿಗೆ ಹೊಟ್ಟೆನೋವು ತಕ್ಷಣ ಮಾಯವಾಯಿತಂತೆ. ಪ್ರತಿವರ್ಷದಂತೆ ಗೋಪಾಲದಾಸರು ತಿರುಪತಿಯ ಬ್ರಹ್ಮೋತ್ಸವಕ್ಕೆ ಹೊರಟಾಗ ಶ್ರೀನಿವಾಸಾಚಾರ್ಯರೂ ಅವರ ಜೊತೆಯಲ್ಲಿ ಹೊರಟರು. ಕಾಲುನಡಿಗೆಯಲ್ಲೇ ಬೆಟ್ಟ ಹತ್ತಿದ ಪರಿಣಾಮವಾಗಿ ಶ್ರೀನಿವಾಸಾಚಾರ್ಯರು ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಗೋಪಾಲದಾಸರು ಗುರುಗಳಾದ ವಿಜಯದಾಸರನ್ನು ನೆನೆದು ಅವರ ಆದೇಶದ ಮೇರೆಗೆ ಧನ್ವಂತ್ರಿಯ ಸ್ತೋತ್ರ ಮಾಡಿ ತಮ್ಮ ಆಯಸ್ಸಿನಲ್ಲಿ ನಲವತ್ತು ವರ್ಷಗಳನ್ನು ಶ್ರೀನಿವಾಸಾಚಾರ್ಯರಿಗೆ ದಾನ ಮಾಡಿದರೆಂದು ಪ್ರತೀತಿ. ಈ ಪ್ರಸಂಗವನ್ನು ರಂಗಪ್ಪ ದಾಸರು ಹೀಗೆ ವರ್ಣಿಸಿದ್ದಾರೆ, “ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯದಾಸರ ದಂಡ ನಮನವ ಮಾಡಿ ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ ಹರುಷದಿಂದುತ್ತುನೂರು ಸೇರಲುಪರಿ ಹರಾಗುವದೆಂದನು ಬರಲು ಭಕ್ರಯವೊಳಗೆ ನಾಲ್ವತ್ತೋರುಷ ಆಯುವನಿತ್ತನು.” ಜಗನ್ನಾಥದಾಸರು ತಮ್ಮ ರೋಗ ವಾಸಿಯಾದದ್ದು, ಅಪಮೃತ್ಯು ಪರಿಹಾರವಾದದ್ದು ಗೋಪಾಲದಾಸರ ಅನುಗ್ರಹದಿಂದಲೇ ಎಂಬ ಅಚಲ ವಿಶ್ವಾಸವನ್ನು ತಮ್ಮ ಕೀರ್ತನೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ. ಗೋಪಾಲದಾಸರಾಯ ನಿನ್ನಯ ಪಾದ ನಾ ಪೊಂದಿದೆನು ನಿಶ್ಚಯ ||ಪ|| ಘೋರವ್ಯಾಧಿಗಳ ನೋಡಿ ಭೂರಿಕರುಣವ ಮಾಡಿ ತೋರಿದರಿವರೇ ಉದ್ಧಾರಕರೆಂದಂದದಿ ನಾರಭ್ಯ ತವಪಾದ ಸೇರಿದೆ ಸಲಹೆಂದು ||೧|| ಅಪಮೃತ್ಯುವನು ಪರಿದೆ ಎನ್ನೊಳಗಿದ್ದ ಅಪರಾಧಗಳ ಮರೆದೆ ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು ನಿಪುಣನೆಂದೆನಿಸಿದೆ ತಪಸಿಗಳಿಂದ ||೨|| ಕೇವಲ ನಲವತ್ತು ವರುಷಗಳ ಜೀವಿಸಿದ ಗೋಪಾಲದಾಸರು ತಮ್ಮ ಅಲ್ಪ ಜೀವಿತಾವಧಿಯಲ್ಲೇ ಅನೇಕ ರಚನೆಗಳನ್ನು ರಚಿಸಿದರು. ಅವರು ದೈವಾದೀನರಾದಾಗ ಅವರ ತಮ್ಮ ವರದಗೋಪಾಲವಿಠಲರು ತಮ್ಮ ಅಣ್ಣನ ಬಗ್ಗೆ “ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿ ಪುಣ್ಯಲೋಕವ ಸೇರಿದೆಯಾ” ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಹಾಗೂ “ಲೇಸಾಗಿ ಭಜಿಸುವೆ ಗೋಪಾಲದಾಸರ” ಎನ್ನುವ ತಮ್ಮ ಇನ್ನೊಂದು ಕೃತಿಯಲ್ಲಿ ಗೋಪಾಲದಾಸರ ಜನನ, ವಿಜಯದಾಸರಲ್ಲಿ ಅವರ ಶಿಷ್ಯತ್ವ, ತೀರ್ಥಯಾತ್ರೆಯ ವೈಭವ, ಪದಗಳ ರಚನೆ ಮುಂತಾದವುಗಳನ್ನು ವಿವರಿಸಿದ್ದಾರೆ. ಆಧಾರ:- ಡಾ. ಟಿ.ಎನ್. ನಾಗರತ್ನ ಅವರು ಸಂಪಾದಿಸಿರುವ ಶ್ರೀ ಗೋಪಾಲದಾಸರ ಕೃತಿಗಳು