ಆರು ಬದುಕಿದರಯ್ಯ (ಪುರಂದರದಾಸರದು)

ಆರು ಬದುಕಿದರಯ್ಯ (ಪುರಂದರದಾಸರದು)

ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ || ತೋರು ಈ ಧರೆಯೊಳಗೆ ಒಬ್ಬರನು ಕಾಣೆ || ಅನುಪಲ್ಲವಿ || ಕರಪತ್ರದಿಂದ ತಾಮ್ರಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧| ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ || ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ ಗರುಡವಾಹನ ನಿನ್ನ ಚರಿಯನರಿಯೆ ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||